ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಕೈದಿಗಳನ್ನು ಬೇಗನೇ ಬಿಡುಗಡೆ ಮಾಡಬೇಕೆಂದು ಕೋರಿದ ಭಾರತ
ಸಾಂದರ್ಭಿಕ ಚಿತ್ರ \ Photo: PTI
ಹೊಸದಿಲ್ಲಿ: ತಮ್ಮ ಜೈಲುಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿರುವ 254 ಭಾರತೀಯ ಮೀನುಗಾರರು ಮತ್ತು ನಾಲ್ವರು ನಾಗರಿಕ ಕೈದಿಗಳ ಬಿಡುಗಡೆ ಮತ್ತು ವಾಪಸಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭಾರತವು ಶನಿವಾರ ಪಾಕಿಸ್ತಾನವನ್ನು ಕೋರಿದೆ.
ಪಾಕಿಸ್ತಾನದ ವಶದಲ್ಲಿರುವ ಮತ್ತು ಭಾರತೀಯರು ಎಂದು ನಂಬಲಾಗಿರುವ ಉಳಿದ 12 ಮೀನುಗಾರರು ಮತ್ತು 14 ನಾಗರಿಕ ಕೈದಿಗಳಿಗೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ತಕ್ಷಣ ಅವಕಾಶವನ್ನು ಒದಗಿಸುವಂತೆಯೂ ಪಾಕ್ ಸರಕಾರವನ್ನು ಕೋರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಉಭಯ ದೇಶಗಳು ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳನ್ನು ವಿನಿಮಯಿಸಿಕೊಂಡ ಸಂದರ್ಭದಲ್ಲಿ ಭಾರತವು ಈ ಮನವಿಯನ್ನು ಮಾಡಿಕೊಂಡಿದೆ. 2008ರ ಒಪ್ಪಂದದಡಿ ಭಾರತ ಮತ್ತು ಪಾಕಿಸ್ತಾನ ಪ್ರತಿ ವರ್ಷ ಜ.1 ಮತ್ತು ಜು.1ರಂದು ಈ ಪಟ್ಟಿಗಳನ್ನು ಪರಸ್ಪರ ವಿನಿಮಯಿಸಿಕೊಳ್ಳುತ್ತವೆ. ನಾಗರಿಕ ಕೈದಿಗಳು, ನಾಪತ್ತೆಯಾಗಿರುವ ರಕ್ಷಣಾ ಸಿಬ್ಬಂದಿಗಳು ಮತ್ತು ಮೀನುಗಾರರನ್ನು ಅವರ ದೋಣಿಗಳ ಸಹಿತ ಶೀಘ್ರ ಬಿಡುಗಡೆಗೊಳಿಸುವಂತೆ ಮತ್ತು ಸ್ವದೇಶಕ್ಕೆ ರವಾನಿಸುವಂತೆ ಪಾಕಿಸ್ತಾನವನ್ನು ಕೇಳಿಕೊಳ್ಳಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಭಾರತವು ತನ್ನ ವಶದಲ್ಲಿರುವ, ಪಾಕಿಸ್ತಾನಿಗಳಾಗಿರುವ ಅಥವಾ ಪಾಕಿಸ್ತಾನಿಗಳೆಂದು ನಂಬಲಾಗಿರುವ 343 ನಾಗರಿಕ ಕೈದಿಗಳು ಮತ್ತು 74 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ. ಇದೇ ರೀತಿ ಪಾಕಿಸ್ತಾನವು ತನ್ನ ವಶದಲ್ಲಿರುವ ಭಾರತೀಯರಾಗಿರುವ ಅಥವಾ ಭಾರತೀಯರೆಂದು ನಂಬಲಾಗಿರುವ 42 ನಾಗರಿಕ ಕೈದಿಗಳು ಮತ್ತು 266 ಮೀನುಗಾರರ ಪಟ್ಟಿಯನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಸರಕಾರದ ನಿರಂತರ ಪ್ರಯತ್ನಗಳಿಂದಾಗಿ 2014ರಿಂದ 2,559 ಭಾರತೀಯ ಮೀನುಗಾರರು ಮತ್ತು 63 ಭಾರತೀಯ ನಾಗರಿಕ ಕೈದಿಗಳು ಪಾಕಿಸ್ತಾನದಿಂದ ಸ್ವದೇಶಕ್ಕೆ ಮರಳಿದ್ದಾರೆ. ಇದರಲ್ಲಿ ಈ ವರ್ಷ ಪಾಕಿಸ್ತಾನದಿಂದ ಮರಳಿರುವ 398 ಭಾರತೀಯ ಮೀನುಗಾರರು ಮತ್ತು ಐವರು ಭಾರತೀಯ ನಾಗರಿಕ ಕೈದಿಗಳು ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.