ಹೆಚ್ಚುತ್ತಿರುವ ಬಿಸಿಗಾಳಿಯನ್ನು ಎದುರಿಸಲು ಭಾರತವು ಸಜ್ಜಾಗಿಲ್ಲ: ಅಧ್ಯಯನದಿಂದ ಬಹಿರಂಗ
►ತೀವ್ರವಾದ ಶಾಖದ ಅಲೆಗಳಿಂದಾಗಿ ಭಾರತದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಬಹುದು ಎಂದ ವರದಿ

Photo Credit | PTI
ಹೊಸದಿಲ್ಲಿ: ಭವಿಷ್ಯದಲ್ಲಿ ಹೆಚ್ಚುತ್ತಿರುವ ಉಷ್ಣ ಮಾರುತ ಅಥವಾ ಬಿಸಿಗಾಳಿಯನ್ನು ನಿಭಾಯಿಸಲು ಭಾರತದ ಸಿದ್ಧತೆಯು ಕಳಪೆಯಾಗಿದೆ ಎಂದು ನೂತನ ಅಧ್ಯಯನ ವರದಿಯೊಂದು ಬೆಟ್ಟು ಮಾಡಿದೆ. ದೇಶವು ಬಿಸಿಗಾಳಿಗೆ ತಕ್ಷಣದ ಪ್ರತಿಕ್ರಿಯೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆಯೇ ಹೊರತು ದೀರ್ಘಾವಧಿಯ ಕಾರ್ಯತಂತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ಅದು ಪ್ರತಿಪಾದಿಸಿದೆ.
ಮುಂಬರುವ ವರ್ಷಗಳಲ್ಲಿ ಆಗಾಗ್ಗೆ ತೀವ್ರವಾದ ದೀರ್ಘಕಾಲಿಕ ಶಾಖದ ಅಲೆಗಳಿಂದಾಗಿ ಭಾರತದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಬಹುದು ಎಂದು ವರದಿಯು ಎಚ್ಚರಿಕೆ ನೀಡಿದೆ. ವರದಿಯನ್ನು ದಿಲ್ಲಿಯ ಲಾಭೋದ್ದೇಶವಿಲ್ಲದ ಸಂಸ್ಥೆ ಸಸ್ಟೈನೇಬಲ್ ಫ್ಯೂಚರ್ಸ್ ಕೊಲ್ಯಾಬರೇಟಿವ್ ಸಿದ್ಧಪಡಿಸಿದ್ದು,ಕಿಂಗ್ಸ್ ಕಾಲೇಜ್ ಲಂಡನ್,ಹಾರ್ವರ್ಡ್ ವಿವಿ,ಪ್ರಿನ್ಸ್ಟೌನ್ ವಿವಿ ಮತ್ತು ಕ್ಯಾಲಿಫೋರ್ನಿಯಾ ವಿವಿಗಳ ವಿದ್ವಾಂಸರು ವರದಿಯ ಸಹಲೇಖಕರಾಗಿದ್ದಾರೆ.
ಮುಂಬರುವ ದಶಕಗಳಲ್ಲಿ ಮರಣ ಪ್ರಮಾಣ ಮತ್ತು ಆರ್ಥಿಕ ಹಾನಿಯಲ್ಲಿ ಗಮನಾರ್ಹ ಹೆಚ್ಚಳವನ್ನು ತಡೆಯಲು ಹಲವಾರು ದೀರ್ಘಾವಧಿಯ ಕ್ರಮಗಳನ್ನು ಅನುಷ್ಠಾನಿಸುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ಕಿಂಗ್ಸ್ ಕಾಲೇಜ್ ಲಂಡನ್ನಲ್ಲಿ ಸಂಶೋಧಕರಾಗಿರುವ ವರದಿಯ ಸಹಲೇಖಕ ಆದಿತ್ಯ ವಲಿಯಥನ್ ಪಿಳ್ಳೈ ಹೇಳಿದ್ದಾರೆ.
ಅಲ್ಪಾವಧಿ ಕ್ರಮಗಳೊಂದಿಗೆ ಸಮಸ್ಯೆಯೆಂದರೆ ದೀರ್ಘಾವಧಿ ಕ್ರಮಗಳನ್ನು ಜಾರಿಗೊಳಿಸುವವರೆಗೂ ಅವುಗಳ ಪರಿಣಾಮವನ್ನು ಸುಲಭವಾಗಿ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಬೆಟ್ಟು ಮಾಡಿದ್ದಾರೆ.
ಅಲ್ಪಾವಧಿಯ ಕ್ರಮಗಳು ಜೀವರಕ್ಷಕ ಕ್ರಮಗಳಾಗಿದ್ದರೆ,ದೀರ್ಘಾವಧಿ ಕ್ರಮಗಳು ಆರೋಗ್ಯ ವ್ಯವಸ್ಥೆಗಳನ್ನು ಬಲಗೊಳಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಹಾಗೂ ಭವಿಷ್ಯದ ಪರಿಣಾಮಗಳನ್ನು ತಗ್ಗಿಸಲು ಪರಿಸರ ಕ್ರಮಗಳ ಮೇಲೆ ಗಮನವನ್ನು ಹರಿಸಿರುತ್ತವೆ.
ಅಧ್ಯಯನವು ಒಂಭತ್ತು ಪ್ರಮುಖ ಮಹಾನಗರಗಳ ಸಮೀಕ್ಷೆ ನಡೆಸಿದ್ದು,ಹೆಚ್ಚುತ್ತಿರುವ ಶಾಖದ ಅಲೆಗಳನ್ನು ತಗ್ಗಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ತುರ್ತು ಕ್ರಮಗಳನ್ನು ಗುರುತಿಸಿದೆ.
2011ರ ಜನಗಣತಿಯಂತೆ ದೇಶದ ಜನಸಂಖ್ಯೆಯಲ್ಲಿ ಸಮೀಕ್ಷೆಗೊಳಗಾದ ಬೆೆಂಗಳೂರು,ದಿಲ್ಲಿ,ಫರೀದಾಬಾದ್,ಗ್ವಾಲಿಯರ್,ಕೋಟಾ,ಲುಧಿಯಾನಾ,ಮೀರತ್,ಮುಂಬೈ ಮತ್ತು ಸೂರತ್ ನಗರಗಳ ಒಟ್ಟು ಪಾಲು ಶೇ.11ಕ್ಕಿಂತ ಹೆಚ್ಚಿದ್ದು,ಭವಿಷ್ಯದಲ್ಲಿ ಉಷ್ಣ ಮಾರುತದಿಂದ ಹೆಚ್ಚಿನ ಅಪಾಯವನ್ನು ಹೊಂದಿರುವ ನಗರಗಳಲ್ಲಿ ಸೇರಿವೆ. ಈ ನಗರಗಳು ಉಷ್ಣ ಮಾರುತಗಳಿಗೆ ತಕ್ಷಣದ ಪ್ರತಿಕ್ರಿಯೆಯ ಮೇಲೆ ಗಮನ ಹರಿಸುತ್ತಿವೆ,ಆದರೆ ದೀರ್ಘಾವಧಿಯ ಕ್ರಮಗಳು ವಿರಳವಾಗಿವೆ ಎಂದು ವರದಿಯು ಹೇಳಿದೆ.
ದುರ್ಬಲತೆಯ ಮೌಲ್ಯಮಾಪನ ಮತ್ತು ನಗರದಲ್ಲಿಯ ಹೆಚ್ಚು ಬಿಸಿಯುಂಟಾಗುವ ಪ್ರದೇಶಗಳ ಗುರುತಿಸುವಿಕೆ,ಆರೋಗ್ಯ ಸಿಬ್ಬಂದಿಗಳು ಮತ್ತು ಉಷ್ಣ ಕ್ರಿಯಾ ಯೋಜನೆಯ ಅನುಷ್ಠಾನಕಾರರನ್ನು ಹೆಚ್ಚಿನ ಸಾಮರ್ಥ್ಯದೊಂದಿಗೆ ಸಜ್ಜುಗೊಳಿಸುವುದು ಹಾಗೂ ಇಂಧನ ಕ್ಷಮತೆಯ ತಂಪಾಗಿಸುವ ಸಾಧನಗಳನ್ನು ಒದಗಿಸಲು ತಂತ್ರಜ್ಞಾನದಲ್ಲಿ ಹೂಡಿಕೆ ಸೇರಿದಂತೆ ಕ್ರಮಗಳಲ್ಲಿ ತುರ್ತು ಸಾಂಸ್ಥಿಕ ಬದಲಾವಣೆಗಳನ್ನು ವರದಿಯು ಶಿಫಾರಸು ಮಾಡಿದೆ.