ಗಡಿಯಾಚೆಗೂ ನುಗ್ಗಿ ಶತ್ರು ಸಂಹಾರ ಮಾಡಲು ಭಾರತ ಸಮರ್ಥವಾಗಿದೆ: ರಾಜ್ ನಾಥ್ ಸಿಂಗ್
ಫೋಟೋ: PTI
ರಾಯ್ಪುರ: ಪಾಕಿಸ್ತಾನವು ಭಾರತವನ್ನು ಪ್ರಚೋದಿಸಲು ಯತ್ನಿಸಬಾರದು. ಅಗತ್ಯ ಬಿದ್ದಲ್ಲಿ ಭಾರತವು ನೆರೆಯ ರಾಷ್ಟ್ರದ ಪ್ರಾಂತವನ್ನು ಪ್ರವೇಶಿಸಿ,ಶತ್ರುಗಳನ್ನು ಹತ್ಯೆಗೈಯಲು ಸಮರ್ಥವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಚತ್ತೀಸ್ಘಡದ ಕಾಂಕೇರ್ ಜಿಲ್ಲೆಯಲ್ಲಿ ಶನಿವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ರಾಜ್ನಾಥ್ ಸಿಂಗ್ ಅವರು ‘‘ಭಾರತದ ತಂಟೆಗೆ ಬರಬಾರದೆಂದು ನನ್ನ ನೆರೆಹೊರೆಯ ದೇಶಕ್ಕೆ ನಾನು ಹೇಳಲಿಚ್ಛಿಸುತ್ತೇನೆ. ನಾವು ನಮ್ಮ ಗಡಿಯನ್ನು ಪ್ರವೇಶಿಸಿದವರನ್ನು ಮಾತ್ರವಲ್ಲ, ಅಗತ್ಯವಿದ್ದಲ್ಲಿ ಗಡಿಯಾಚೆಗೂ ನುಗ್ಗಿ ಹತ್ಯೆಗೈಯಬಲ್ಲೆವು. ಈಗ ಭಾರತ ಬದಲಾಗಿದೆ’’ ಎಂದವರು ಎಚ್ಚರಿಕೆ ನೀಡಿದರು.
ಜಮ್ಮುಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತೀಯ ಸೇನೆಯು, ಪಾಕ್ ಗಡಿಯಾಚೆಗೆ ಸರ್ಜಿಕಲ್ ದಾಳಿ ನಡೆಸಿದ್ದನ್ನು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ‘‘ ಪಾಕಿಸ್ತಾನದಿಂದ ಕೆಲವು ಭಯೋತ್ಪಾದಕರು ಭಾರತದೊಳಗೆ ನುಸುಳಿ ನಮ್ಮ ಹಲವಾರು ಯೋಧರನ್ನು ಹತ್ಯೆಗೈದಿದ್ದರು. ಆಗ ನಾನು ಗೃಹ ಸಚಿವನಾಗಿದ್ದೆ. ಪ್ರಧಾನಿಯವರು ದಿಲ್ಲಿಯಲ್ಲಿ ಸಭೆ ನಡೆಸಿ, ಹತ್ತು ನಿಮಿಷಗಳೊಳಗೆ ಸರ್ಜಿಕಲ್ ದಾಳಿ ನಡೆಸುವ ನಿರ್ಧಾರವನ್ನು ಕೈಗೊಂಡರು. ನಮ್ಮ ಸೇನೆಯ ಯೋಧರು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ಯಶಸ್ವಿಯಾಗಿ ‘ತಟಸ್ಥ’ಗೊಳಿಸಿದರು’’ ಎಂದು ರಾಜ್ನಾಥ್ ಹೇಳಿದರು.
ಚತ್ತೀಸ್ಗಢದಲ್ಲಿ ಎಡಪಂಥೀಯ ತೀವ್ರವಾದವನ್ನು ಕೊನೆಗೊಳಿಸಲು, ರಾಜ್ಯದ ಕಾಂಗ್ರೆಸ್ ಸರಕಾರವು ಕೇಂದ್ರಕ್ಕೆ ನೆರವಾಗುತ್ತಿಲ್ಲವೆಂದು ಅವರು ಆರೋಪಿಸಿದರು. ‘‘ ಭಾರತದಲ್ಲಿ ಎಡಪಂಥೀಯ ತೀವ್ರವಾದವು ಕೇವಲ ೧೦ರಿಂದ ೧೨ ಜಿಲ್ಲೆಗಳಲ್ಲಿ ಮಾತ್ರವೇ ಉಳಿದುಕೊಂಡಿದೆ. ಅವುಗಳಲ್ಲಿ ಕೆಲವು ಜಿಲ್ಲೆಗಳು ಚತ್ತೀಸ್ಗಢದಲ್ಲಿವೆ’’ ಎಂದವರು ಹೇಳಿದರು. ಒಂದು ವೇಳೆ ಅವರು ಸಹಕಾರ ನೀಡುತ್ತಿದ್ದಲ್ಲಿ ಇಡೀ ಭಾರತದಿಂದ ಎಡಪಂಥೀಯ ತೀವ್ರವಾದದ ಪ್ರಭಾವವನ್ನು ನಾವು ಕೊನೆಗೊಳಿಸಬಹುದಾಗಿತ್ತು’’ ಎಂದವರು ಹೇಳಿದರು.
ಚತ್ತೀಸ್ಗಢದಲ್ಲಿ ಅದರಲ್ಲೂ ವಿಶೇಷವಾಗಿ ಬಸ್ತಾರ್ ಪ್ರಾಂತದ ಆದಿವಾಸಿ ಪ್ರದೇಶಗಳಲ್ಲಿ ಮತಾಂತರದ ಘಟನೆಗಳಲ್ಲಿ ಹೆಚ್ಚಳವಾಗಿದೆ ಎಂದು ರಕ್ಷಣಾ ಸಚಿವರು ಆಪಾದಿಸಿದರು. ಬಲವಂತದ ಮತಾಂತರಗಳನ್ನು ತಡೆಯಲು ಕ್ರಮಗಳನು ಕೈಗೊಳ್ಳುವಂತೆ ಅವರು ಕಾಂಗ್ರೆಸ್ ಸರಕಾರವನ್ನು ಆಗ್ರಹಿಸಿದರು.