ರಶ್ಯ ಪರವಾಗಿ ಯುದ್ಧಮಾಡುತ್ತಿರುವ 69 ಭಾರತೀಯರ ಬಿಡುಗಡೆಗೆ ಕಾಯುತ್ತಿರುವ ಭಾರತ : ವಿದೇಶಾಂಗ ಸಚಿವ ಜೈಶಂಕರ್
ಎಸ್. ಜೈಶಂಕರ್ | PTI
ಹೊಸದಿಲ್ಲಿ : ರಶ್ಯ ಸೇನೆಗೆ ನೇಮಕಗೊಂಡಿರುವ 69 ಭಾರತೀಯರ ಬಿಡುಗಡೆಗೆ ಭಾರತ ಕಾಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶುಕ್ರವಾರ ಲೋಕಸಭೆಯಲ್ಲಿ ಹೇಳಿದರು.
‘‘ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ’’ ಎಂದು ಅವರು ತಿಳಿಸಿದರು. ತಪ್ಪು ಮಾಹಿತಿ ನೀಡಿ ಅವರು ರಶ್ಯದ ಪರವಾಗಿ ಉಕ್ರೇನ್ ವಿರುದ್ಧ ಯುದ್ಧ ಮಾಡುವಂತೆ ಪಿತೂರಿ ರೂಪಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಹತ್ತೊಂಭತ್ತು ವ್ಯಕ್ತಿಗಳು ಮತ್ತು ಕಂಪೆನಿಗಳ ವಿರುದ್ಧ ಸಿಬಿಐ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದೆ ಎಂದರು.
ಹತ್ತು ಮಾನವ ಕಳ್ಳಸಾಗಣೆದಾರರ ವಿರುದ್ಧ ಪುರಾವೆ ಲಭಿಸಿದೆ ಮತ್ತು ಅವರ ಗುರುತು ಪತ್ತೆಯಾಗಿದೆ ಎಂದು ಹೇಳಿದ ಅವರು, ಈ ಪೈಕಿ ಇಬ್ಬರು ಆರೋಪಿಗಳನ್ನು ಎಪ್ರಿಲ್ 24 ಮತ್ತು ಮೇ 7ರಂದು ಬಂಧಿಸಲಾಗಿದೆ ಎಂದರು.
‘‘ನಾವು ಅವಸರದ ನಿರ್ಧಾರಕ್ಕೆ ಬಂದು, ಈ ವಿಷಯದಲ್ಲಿ ರಶ್ಯನ್ನರು ಏನೂ ಮಾಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಹೇಳಿದಂತೆ ನಡೆದುಕೊಳ್ಳುವಂತೆ ರಶ್ಯ ಸರಕಾರದ ಒತ್ತಡ ಹೇರುವುದು ಮುಖ್ಯ ಎಂದು ನನಗನಿಸುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಅಂಕಗಳನ್ನು ಪಡೆಯುವುದು ಅಥವಾ ಚರ್ಚೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಉದ್ದೇಶವಲ್ಲ. ಆ 69 ಮಂದಿಯನ್ನು ಮರಳಿ ಪಡೆಯುವುದು ಮುಖ್ಯವಾಗಿದೆ. ಯಾಕೆಂದರೆ, ಭಾರತೀಯ ನಾಗರಿಕರು ವಿದೇಶಗಳ ಸೇನೆಯಲ್ಲಿ ಸೇವೆ ಸಲ್ಲಿಸುವಂತಿಲ್ಲ’’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಜೈಶಂಕರ್ ಹೇಳಿದರು.
ರಶ್ಯ ಸೇನೆ ಸೇರುವಂತೆ ಜನರನ್ನು ತಪ್ಪುದಾರಿಗೆಳೆಯುತ್ತಿರುವ ವ್ಯಕ್ತಿಗಳ ವಿರುದ್ಧ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ರಶ್ಯ ಸೇನೆಗೆ ಭಾರತೀಯರನ್ನು ಸೇರ್ಪಡೆಗೊಳಿಸಿರುವ 91 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಎಂಟು ಮಂದಿ ಯುದ್ಧದಲ್ಲಿ ಮೃತಪಟ್ಟಿದ್ದಾರೆ. 14 ಮಂದಿಯನ್ನು ರಶ್ಯ ಸೇನೆಯಿಂದ ಬಿಡುಗಡೆಗೊಳಿಸಲಾಗಿದೆ ಅಥವಾ ಸರಕಾರದ ನೆರವಿನೊಂದಿಗೆ ವಾಪಸಾಗಿದ್ದಾರೆ. 69 ಮಂದಿ ರಶ್ಯ ಸೇನೆಯಿಂದ ಬಿಡುಗಡೆಗೊಳ್ಳಲು ಈಗಲೂ ಕಾಯುತ್ತಿದ್ದಾರೆ ಎಂದು ಜೈಶಂಕರ್ ತಿಳಿಸಿದರು.