ಸೇನಾ ಹಾರ್ಡ್ ವೇರ್ ಸಹ ಅಭಿವೃದ್ಧಿಯ ಉತ್ತೇಜನಕ್ಕೆ ಭಾರತ ಮತ್ತು ಜಪಾನ್ ಒಪ್ಪಂದ
ಸಾಂದರ್ಭಿಕ ಚಿತ್ರ | PC : freepik
ಹೊಸ ದಿಲ್ಲಿ: ಹಿಂದೂ ಮಹಾಸಾಗರದ ಮೇಲೆ ಪಾರಮ್ಯ ಸಾಧಿಸಲು ಚೀನಾ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಜಪಾನ್ ಸೇನಾಪಡೆಗಳ ನಡುವೆ ಪರಸ್ಪರ ಪೂರೈಕೆ ಮತ್ತು ಸೇವೆಗಳನ್ನು ಒದಗಿಸುವ ಒಪ್ಪಂದಕ್ಕೆ ಶುಕ್ರವಾರ ಭಾರತ ಮತ್ತು ಜಪಾನ್ ತಲುಪಿವೆ.
ಲಾವೋಸ್ ನ ರಾಜಧಾನಿ ವಿಯೆಂಟಿಯಾನ್ ನಲ್ಲಿ ಆಯೋಜಿಸಲಾಗಿರುವ ಪ್ರಾಂತೀಯ ಭದ್ರತಾ ಶೃಂಗಸಭೆಯ ನೇಪಥ್ಯದಲ್ಲಿ ಭಾರತದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹಾಗೂ ಜಪಾನ್ ರಕ್ಷಣಾ ಸಚಿವ ಗೆನ್ ನಕಾತನಿ ನಡುವೆ ನಡೆದ ಸಭೆಯಲ್ಲಿ ಈ ಪ್ರಸ್ತಾವಿತ ಒಪ್ಪಂದದ ಕುರಿತು ಚರ್ಚಿಸಲಾಯಿತು.
ಸೇನಾ ಹಾರ್ಡ್ ವೇರ್ ನ ಸಹ ಉತ್ಪಾದನೆ ಮತ್ತು ಸಹ ಅಭಿವೃದ್ಧಿಯಲ್ಲಿನ ಸಹಕಾರ ವರ್ಧನೆಗೆ ಎರಡೂ ದೇಶಗಳು ಸಮ್ಮತಿಸಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
“ಭಾರತೀಯ ಮತ್ತು ಜಪಾನ್ ಸೇನಾಪಡೆಗಳ ನಡುವಿನ ಪರಸ್ಪರ ಕಾರ್ಯ ಸಾಧ್ಯತೆಯನ್ನು ಮತ್ತಷ್ಟು ಸುಧಾರಿಸಲು ಪರಸ್ಪರ ಪೂರೈಕೆ ಮತ್ತು ಸೇವಾ ಒಪ್ಪಂದ ಹಾಗೂ ಎರಡೂ ದೇಶಗಳ ಸೇನಾಪಡೆಗಳು ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಮರಾಭ್ಯಾಸ ನಡೆಸುವ ಕುರಿತು ಉಭಯ ಸಚಿವರು ಚರ್ಚಿಸಿದರು” ಎಂದು ತನ್ನ ಪ್ರಕಟಣೆಯಲ್ಲಿ ರಕ್ಷಣಾ ಸಚಿವಾಲಯ ಹೇಳಿದೆ.
ಒಂದು ವೇಳೆ ಪರಸ್ಪರ ಪೂರೈಕೆ ಮತ್ತು ಸೇವೆಗಳ ಒಪ್ಪಂದವು ಅಂತಿಮಗೊಂಡರೆ, ಉಭಯ ದೇಶಗಳ ಸೇನಾಪಡೆಗಳು ರಿಪೇರಿಗಾಗಿ ಪರಸ್ಪರರ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಹಾಗೂ ಪೂರೈಕೆಯ ಮರುಪೂರಣ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇದರೊಂದಿಗೆ, ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನಲಾಗಿದೆ.