ಭಾರತ ಹಿಂದೂ ರಾಷ್ಟ್ರವಲ್ಲ ಮತ್ತು ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ: ಭಾಗವತ್ ವಿರುದ್ಧ ಸ್ವಾಮಿ ಪ್ರಸಾದ್ ಮೌರ್ಯ ವಾಗ್ದಾಳಿ
ಸ್ವಾಮಿ ಪ್ರಸಾದ್ ಮೌರ್ಯ / ಮೋಹನ್ ಭಾಗವತ್ (Photo: PTI)
ಹೊಸದಿಲ್ಲಿ: ಭಾರತ ಹಿಂದೂ ರಾಷ್ಟ್ರ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಮುಖ್ಯಸ್ಥ ಮೋಹನ್ ಭಾಗವತ್ ರ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಭಾರತವೆಂದೂ ಹಿಂದೂ ರಾಷ್ಟ್ರವಾಗಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ್ವಾಮಿ ಪ್ರಸಾದ್ ಮೌರ್ಯ, “ಭಾರತವು ಹಿಂದೂ ರಾಷ್ಟ್ರವಲ್ಲ ಮತ್ತದು ಎಂದಿಗೂ ಹಿಂದೂ ರಾಷ್ಟ್ರವಾಗಿರಲಿಲ್ಲ. ಭಾರತವು ತನ್ನ ಮೂಲಸ್ವರೂಪದಲ್ಲಿ ಬಹುತ್ವ ದೇಶವಾಗಿದೆ” ಎಂದು ಹೇಳಿದ್ದಾರೆ.
“ನಮ್ಮ ಸಂವಿಧಾನವು ಜಾತ್ಯತೀತ ರಾಷ್ಟ್ರ ಪರಿಕಲ್ಪನೆಯನ್ನು ಆಧರಿಸಿದೆ. ಭಾರತದಲ್ಲಿನ ಪ್ರಜೆಗಳೆಲ್ಲ ಭಾರತೀಯರು. ನಮ್ಮ ಸಂವಿಧಾನವು ಎಲ್ಲ ಧರ್ಮಗಳು, ನಂಬಿಕೆಗಳು, ವರ್ಗಗಳು ಹಾಗೂ ಸಂಸ್ಕೃತಿಗಳ ಪ್ರಾತಿನಿಧ್ಯವನ್ನು ಪ್ರತಿನಿಧಿಸುತ್ತದೆ” ಎಂದು ಅವರು ಬರೆದಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, “ಹಿಂದೂಸ್ಥಾನ (ಭಾರತ) ಹಿಂದೂ ರಾಷ್ಟ್ರವಾಗಿದ್ದು, ಇದು ವಾಸ್ತವ. ತಾರ್ಕಿಕವಾಗಿ ಎಲ್ಲ ಭಾರತೀಯರೂ ಹಿಂದೂಗಳು ಹಾಗೂ ಹಿಂದೂಗಳೆಂದರೆ ಎಲ್ಲ ಭಾರತೀಯರು. ನಾವೀಗ ಇರುವ ಭಾರತವು ಹಿಂದೂ ಸಂಸ್ಕೃತಿ, ಹಿಂದೂ ಪೂರ್ವಜರು ಹಾಗೂ ಹಿಂದೂ ಭೂಮಿಗೆ ಸಂಬಂಧಿಸಿದೆ, ಅದು ಬಿಟ್ಟು ಬೇರೇನೂ ಇಲ್ಲ” ಎಂದಿದ್ದರು.
“ಕೆಲವು ವ್ಯಕ್ತಿಗಳು ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತೆ ಕೆಲವರು ಅರ್ಥ ಮಾಡಿಕೊಂಡ ನಂತರವೂ ತಮ್ಮ ಅಭ್ಯಾಸಗಳು ಹಾಗೂ ಸ್ವಾರ್ಥದಿಂದಾಗಿ ಅನುಷ್ಠಾನಗೊಳಿಸುತ್ತಿಲ್ಲ. ಅಲ್ಲದೆ, ಕೆಲವು ಜನರಿಗೆ ಇದು ಅರ್ಥವಾಗಿಲ್ಲ ಅಥವಾ ಮರೆತು ಹೋಗಿದ್ದಾರೆ” ಎಂದೂ ಅವರು ಹೇಳಿದ್ದರು.