‘ಇಂಡಿಯಾ’ಪಾಲುದಾರ ಟಿಎಂಸಿಯನ್ನು ತರಾಟೆಗೆತ್ತಿಕೊಂಡ ಸಿಪಿಎಂ, ಕಾಂಗ್ರೆಸ್
ಪಶ್ಚಿಮ ಬಂಗಾಳದಲ್ಲಿ ಈಡಿ ಅಧಿಕಾರಿಗಳ ಮೇಲೆ ದಾಳಿ
ಸಾಂದರ್ಭಿಕ ಚಿತ್ರ (PTI)
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ಈಡಿ)ದ ಅಧಿಕಾರಿಗಳ ಮೇಲಿನ ದಾಳಿಯು ತಮ್ಮ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಟಿಎಂಸಿ ವಿರುದ್ಧ ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಗ್ಗೂಡಿಸಿದ್ದು, ಮಮತಾ ಬ್ಯಾನರ್ಜಿ ಸರಕಾರದಡಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಅವು ಖಂಡಿಸಿವೆ.
ನಾಲ್ಕು ವರ್ಷಗಳ ಹಿಂದೆ ಕೋಲ್ಕತಾದ ಆಗಿನ ಪೋಲಿಸ್ ಆಯುಕ್ತ ಹಾಗೂ ಹಾಲಿ ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿಯನ್ನು ವಿರೋಧಿಸಿ ಬ್ಯಾನರ್ಜಿ ಧರಣಿ ನಡೆಸಿದ್ದನ್ನು ಉಲ್ಲೇಖಿಸಿದ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಅವರು, ಬಂಗಾಳದ ಮುಖ್ಯಮಂತ್ರಿಗಳು ಶುಕ್ರವಾರ ಉತ್ತರ ಪರಗಣ ಜಿಲ್ಲೆಯ ಬಸೀರ್ಹಾಟ್ನಲ್ಲಿ ಸಂಭವಿಸಿದ್ದ ಘಟನೆಯ ಹರಿಕಾರರಾಗಿದ್ದಾರೆ ಎಂದು ಹೇಳಿದೆ.
ಶುಕ್ರವಾರ ಬಸೀರ್ ಘಾಟ್ ನಲ್ಲಿ ಟಿಎಂಸಿ ನಾಯಕ ಶಹಾಜಹಾನ್ ಶೇಖ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ತೆರಳಿದ್ದ ಈಡಿ ಅಧಿಕಾರಿಗಳು ಗುಂಪಿನ ದಾಳಿಯಿಂದ ಗಾಯಗೊಂಡಿದ್ದರು.
ಈಡಿ ಅಧಿಕಾರಿಗಳ ಮೇಲಿನ ದಾಳಿಯು ಪೋಲಿಸರಿಂದ ಪ್ರಚೋದಿತವಾಗಿತ್ತು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ಚೌಧುರಿ ಹೇಳಿದರು. ಪೋಲಿಸ್ ಇಲಾಖೆಯನ್ನು ಬ್ಯಾನರ್ಜಿಯವರೇ ನೋಡಿಕೊಳ್ಳುತ್ತಿದ್ದಾರೆ.
ಆಡಳಿತಾರೂಢ ಪಕ್ಷದ ದುಷ್ಕರ್ಮಿಗಳಿಂದ ಈಡಿ ಅಧಿಕಾರಿಗಳ ಮೇಲೆ ದಾಳಿಯ ಬಳಿಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ ಎನ್ನುವುದು ಹಿಂದೆಂದಿಗಿಂತಲೂ ಸ್ಪಷ್ಟವಾಗಿದೆ. ಇಂದು ಅವರು ಗಾಯಗೊಂಡಿದ್ದಾರೆ, ನಾಳೆ ಅವರ ಹತ್ಯೆಯೂ ನಡೆಯಬಹುದು. ಹಾಗೆ ನಡೆದರೂ ಆಶ್ಚರ್ಯ ಪಡುವಂತಹ ಸ್ಥಿತಿ ರಾಜ್ಯದಲ್ಲಿಲ್ಲ. ಇದು ರಾಷ್ಟ್ರಪತಿ ಆಡಳಿತಕ್ಕೆ ಸೂಕ್ತ ಪ್ರಕರಣವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಚೌಧುರಿ ಹೇಳಿದರು.
ಈಡಿ ಅಧಿಕಾರಿಗಳ ಮೇಲೆ ದಾಳಿ ಕುರಿತು ಸಿಪಿಎಂ ಮತ್ತು ಕಾಂಗ್ರೆಸ್ನ ಈ ಒಗ್ಗಟ್ಟಿನ ನಿಲುವು ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದ ಸ್ಥಾನ ಹಂಚಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಟಿಎಂಸಿ ಜೊತೆ ತಾನು ಸ್ಥಾನ ಹೊಂದಾಣಿಕೆ ಮಾಡುಕೊಳ್ಳುವುದಿಲ್ಲ ಎಂದು ಸಿಪಿಎಂ ಸ್ಪಷ್ಟಪಡಿಸಿದೆ. ಆದರೆ ಈ ದಾಳಿಗಳ ಹಿನ್ನೆಲೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಏನಾಗಲಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.