ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರ | 28 ಬಿಲಿಯನ್ ಡಾಲರ್‌ಗೇರಿಸಲು ಭಾರತ-ಖತರ್ ಸಂಕಲ್ಪ
ಪ್ರಧಾನಿ ಮೋದಿ- ಖತರ್ ಅಮೀರ್ ಅಲ್ ಥಾನಿ ಮಾತುಕತೆ; ‘ವ್ಯೆಹಾತ್ಮಕ ಪಾಲುದಾರಿಕೆ ’ ಒಪ್ಪಂದಕ್ಕೆ ಸಹಿ

ಹೊಸದಿಲ್ಲಿ : ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 28 ಶತಕೋಟಿ ಡಾಲರ್ ಗೆ ದ್ವಿಗುಣಗೊಳಿಸಲು ಭಾರತ ಹಾಗೂ ಖತರ್ ನಿರ್ಧರಿಸಿವೆ. ಅಲ್ಲದೆ ಉಭಯದೇಶಗಳ ನಡುವಿನ ಬಾಂಧವ್ಯವನ್ನು ವ್ಯೆಹಾತ್ಮಕ ಪಾಲುದಾರಿಕೆಯಾಗಿ ಎತ್ತರಕ್ಕೇರಿಸುವುದು ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಭೇಟಿಗೆ ಆಗಮಿಸಿರುವ ಖತರ್ ನ ಆಮೀರ್ ಶೇಖ್ ತಮಿಮ್ ಬಿನ್ ಹಮದ್ ಅಲ್ ಥಾನಿ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿಹಾಕಲಾಯಿತು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಖತರ್ ನ ಅಮೀರ್ ಅವರು ಹೊಸದಿಲ್ಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ವಿಷಯಗಳಿಗೆ ಸಂಬಂಧಿಸಿ ವಿಸ್ತೃತ ಮಾತುಕತೆಗಳನ್ನು ನಡೆಸಿದರು. ಮೋದಿ ಹಾಗೂ ಖತರ್ ಅಮೀರ್ ಅವರು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ ಹಾಗೂ ಜನರ ನಡುವಿನ ಬಾಂಧವ್ಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಸ್ತೃತವಾಗಿ ಮಾತುಕತೆ ನಡೆಸಿದರು.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆಯೂ ಅವರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಖತರ್ ನ ಪ್ರಧಾನಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಸ್ಸೀಮ್ ಅಲ್ ಥಾನಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಒಪ್ಪಂದದ ದಾಖಲೆಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಭಾರತ ಹಾಗೂ ಖತರ್ ನಡುವೆ ಅವಳಿ ತೆರಿಗೆ ವಿಧಿಸುವಿಕೆ ನಿವಾರಣೆ ಹಾಗೂ ಆದಾಯ ತೆರಿಗೆ ವಂಚನೆ ತಡೆ ಕುರಿತ ಪರಿಷ್ಕೃತ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಅರುಣ್ ಕುಮಾರ್ ಅವರು ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘‘ಉಭಯ ದೇಶಗಳ ನಡುವಿನ ವ್ಯೆಹಾತ್ಮಕ ಪಾಲುದಾರಿಕೆಯ ಒಪ್ಪಂದವು ಈಗ ಇರುವ ದ್ವಿಪಕ್ಷೀಯ ಬಾಂಧವ್ಯವನ್ನು ವ್ಯೆಹಾತ್ಮಕ ಮಟ್ಟಕ್ಕೆ ಕೊಂಡೊಯ್ಯಲಿದೆ. ಆ ಮೂಲಕ ವ್ಯಾಪಾರ, ಇಂಧನ ಭದ್ರತೆ , ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಭಯ ದೇಶಗಳ ನಡುವಿನ ಸಹಕಾರವು ಗಾಢವಾಗಲಿದೆ’’ ಎಂದರು.
ಮುಂದಿನ ಐದು ವರ್ಷಗಳಲ್ಲಿ ಭಾರತ-ಖತರ್ ದ್ವಿಪಕ್ಷೀಯ ವ್ಯಾಪಾರವನ್ನು ಈಗ ಇರುವ 14 ಶತಕೋಟಿ ಡಾಲರ್‌ಗಳಿಂದ 28 ಶತಕೋಟಿ ಡಾಲರ್ ಗೆ ದ್ವಿಗುಣಗೊಳಿಸುವ ಗುರಿಯನ್ನು ನಿಗದಿಪಡಿಸಲು ಪ್ರಧಾನಿ ಮೋದಿ ಹಾಗೂ ಖತರ್ ಅಮೀರ್ ಅವರು ಸಮ್ಮತಿಸಿದ್ದಾರೆಂದು ಅರುಣ್‌ಕುಮಾರ್ ಹೇಳಿದರು.
ಕಳೆದ ವರ್ಷ ಮೋದಿ ಅವರು ಖತರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತವು ಆ ಗಲ್ಫ್ ರಾಷ್ಟ್ರದಿಂದ ಮುಂದಿನ 20 ವರ್ಷಗಳವರೆಗೆ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ)ಯನ್ನು ಆಮದು ಮಾಡಿಕೊಳ್ಳುವ 78 ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಸಹಿಹಾಕಿತ್ತು. ಇದರಿಂದಾಗಿ ಪ್ರಚಲಿತದಲ್ಲಿರುವ ದರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಎನ್ ಎನ್ ಜಿ ಯನ್ನು ಆಮದು ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿದೆ.
ಖತರ್ ನ ಅಮೀರ್ ಅಲ್ ಥಾನಿ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಆಗಮಿಸಿದ್ದರು.
ಇಂದು ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತರ್ ಅಮೀರ್ ಅವರಿಗೆ ಸೇನಾಪಡೆಗಳ ಗೌರವರಕ್ಷೆಯ ಸ್ವಾಗತವನ್ನು ನೀಡಲಾಯಿತು. ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.