ಸರಕಾರದ ಆದೇಶದಿಂದ ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿ ಭಾರತಕ್ಕೆ ಜಗತ್ತಿನಲ್ಲಿ ಅಗ್ರ ಸ್ಥಾನ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸರಕಾರದ ಆದೇಶದಿಂದ ಇಂಟರ್ನೆಟ್ ಸ್ಥಗಿತಗೊಳಿಸಲಾಗುವ ಪ್ರಕರಣಗಳಲ್ಲಿ ಜಾಗತಿಕವಾಗಿ ಭಾರತ ಸತತ ಆರನೇ ಬಾರಿಗೆ 2023ರಲ್ಲಿ ಮೊದಲ ಸ್ಥಾನ ಪಡೆದಿದೆ. ʼAccess Nowʼ ಎಂಬ ಡಿಜಿಟಲ್ ಹಕ್ಕುಗಳ ಮತ್ತು ಗೌಪ್ಯತೆ ಸಂಸ್ಥೆಯು ದಾಖಲಿಸಿಕೊಂಡಿರುವ ಅಂಕಿಅಂಶಗಳಿಂದ ಇದು ಬಹಿರಂಗಗೊಂಡಿದೆ.
ಕಳೆದ ವರ್ಷ ಭಾರತ ಸರ್ಕಾರದ ಆದೇಶಾನುಸಾರ 116 ಬಾರಿ ಅಂತರ್ಜಾಲ ಸ್ಥಗಿತಗೊಳಿಸಲಾಗಿತ್ತು. ಈ ಅವಧಿಯಲ್ಲಿ ಜಾಗತಿಕವಾಗಿ 283 ಬಾರಿ ಅಂತರ್ಜಾಲ ಸ್ಥಗಿತಗೊಳಿಸಲಾಗಿತ್ತು ಎಂದು ʼAccess Nowʼ ಇಂದು ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಭಾರತದಲ್ಲಿ ಕಳೆದ ವರ್ಷದ ಒಟ್ಟು 116 ಇಂಟರ್ನೆಟ್ ಸ್ಥಗಿತ ಪ್ರಕರಣಗಳಲ್ಲಿ 65 ಅನ್ನು ಮತೀಯ ಹಿಂಸೆ ಹಿನ್ನೆಲೆಯಲ್ಲಿ ಆದೇಶಿಸಲಾಗಿತ್ತು. ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾದ ಇಂಟರ್ನೆಟ್ ಸ್ಥಗಿತದಲ್ಲಿ ಏಳು ರಾಜ್ಯಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಸ್ಥಗಿತ ಆದೇಶ ನೀಡಲಾಗಿತ್ತು ಎಂದು ವರದಿ ಹೇಳಿದೆ.
“ಕಳೆದ ಐದು ವರ್ಷಗಳಲ್ಲಿ ಭಾರತೀಯ ಪ್ರಾಧಿಕಾರಗಳು 500ಕ್ಕೂ ಹೆಚ್ಚು ಬಾರಿ ಅಂತರ್ಜಾಲ ಸ್ಥಗಿತಗೊಳಿಸಿದ್ದವು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಸತತವಾಗಿ ಲಕ್ಷಾಂತರ ಮಂದಿಯನ್ನು ಕತ್ತಲೆಗೆ ನೂಕಿದ್ದವು,” ಎಂದು ವರದಿ ಹೇಳಿದೆ.
“ಮೇ ಮತ್ತು ಡಿಸೆಂಬರ್ 2023ರ ನಡುವೆ ಮಣಿಪುರದ 32 ಲಕ್ಷ ಜನರು 212 ದಿನಗಳ ಕಾಲ ಅಂತರ್ಜಾಲ ಸ್ಥಗಿತ ಎದುರಿಸಿದ್ದರು ಎಂದು ವರದಿ ಹೇಳಿದೆ. ಇದು 2023ರಲ್ಲಿ ಜಗತ್ತಿನ ಅತ್ಯಂತ ದೀರ್ಘಾವಧಿಯ ಅಂತರ್ಜಾಲ ಸ್ಥಗಿತವಾಗಿದೆ.