"ಭಾರತವು ವಾರದಲ್ಲಿ 4 ದಿನಗಳ ಕೆಲಸಕ್ಕೆ ಬದಲಾಗಬೇಕು": ನಾರಾಯಣಮೂರ್ತಿಗೆ ಸಂಸದ ಕಾರ್ತಿ ಚಿದಂಬರಂ ತಿರುಗೇಟು
ದೀರ್ಘಾವಧಿ ಕೆಲಸಕ್ಕಿಂತ ದಕ್ಷತೆಯತ್ತ ಗಮನ ಹರಿಸಬೇಕು ಎಂದ ಕಾಂಗ್ರೆಸ್ ಸಂಸದ
ನಾರಾಯಣಮೂರ್ತಿ ,
ಹೊಸದಿಲ್ಲಿ: 1986ರಿಂದ ಭಾರತವು ವಾರದಲ್ಲಿ ಆರು ದಿನಗಳ ಕೆಲಸದಿಂದ ಐದು ದಿನಗಳ ಕೆಲಸದ ಸಂಸ್ಕೃತಿಗೆ ರೂಪಾಂತರಗೊಂಡಿರುವುದರಿಂದ ನನಗೆ ಅಸಮಾಧಾನವಾಗಿದೆ ಎಂದು ಇತ್ತೀಚೆಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಕಾರ್ತಿ ಎಂ. ಚಿದಂಬರಂ, “ದೀರ್ಘಾವಧಿ ಕೆಲಸ ಮಾಡುವುದಕ್ಕಿಂತ ದಕ್ಷತೆಯತ್ತ ಗಮನ ಹರಿಸಬೇಕು” ಎಂದು ಕಿವಿಮಾತು ಹೇಳಿದ್ದಾರೆ.
ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಇರಬೇಕು ಎಂದು ಪದೇ ಪದೇ ಆಗ್ರಹಿಸುತ್ತಿರುವ ನಾರಾಯಣಮೂರ್ತಿ, ಭಾರತದ ಅಭಿವೃದ್ಧಿಗೆ ವಿರಾಮಕ್ಕಿಂತ ತ್ಯಾಗದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುತ್ತಾ ಬರುತ್ತಿದ್ದಾರೆ.
ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಾರಾಯಣಮೂರ್ತಿ, ತಮ್ಮ ಮಾತಿಗೆ ನಿದರ್ಶನವಾಗಿ ಪ್ರಧಾನಿ ನರೇಂದ್ರ ಮೋದಿ ವಾರಕ್ಕೆ 100 ಗಂಟೆಗಳ ಕೆಲಸ ಮಾಡುವುದರತ್ತ ಬೊಟ್ಟು ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ತಿ ಎಂ.ಚಿದಂಬರಂ, “ಅಷ್ಟು ಕಠಿಣವಾಗಿ ಕೆಲಸ ಮಾಡುವುದರಿಂದ ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಬೇಕಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ನಾನು ಪ್ರತಿದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಅದು ಆರೂವರೆ ದಿನಗಳ ಕೆಲಸಕ್ಕೆ ಸಮವಾಗಿತ್ತು. ಬೆಳಗ್ಗೆ 6.30 ಗಂಟೆಗೆ ಕಚೇರಿಗೆ ಬರುತ್ತಿದ್ದ ನಾನು, ರಾತ್ರಿ 8.40ಕ್ಕೆ ಕಚೇರಿ ತೊರೆಯುತ್ತಿದ್ದೆ” ಎಂದು 78 ವರ್ಷದ ನಾರಾಯಣಮೂರ್ತಿ ತಮ್ಮ ವೃತ್ತಿ ಜೀವನ ಹಾಗೂ ಕೆಲಸದ ಮೌಲ್ಯದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
ಆದರೆ, ನಾರಾಯಣಮೂರ್ತಿಯವರ ಅನಿಸಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಕಾರ್ತಿ ಎಂ.ಚಿದಂಬರಂ, “ದೀರ್ಘಾವಧಿ ಕೆಲಸ ಮಾಡುವುದು ಅರ್ಥಹೀನ. ಅದರ ಬದಲು ದಕ್ಷತೆಯತ್ತ ಗಮನ ಹರಿಸಬೇಕು” ಎಂದು ಕಿವಿಮಾತು ಹೇಳಿದ್ದಾರೆ.
‘ದೈನಂದಿನ ಜೀವನವು ಹೋರಾಟ, ಅದಕ್ಷತೆ, ಕಳಪೆ ಮೂಲಸೌಕರ್ಯ ಮತ್ತು ಸೌಲಭ್ಯಗಳ ವಿರುದ್ಧದ ಯುದ್ಧವಾಗಿದೆ. ಸಾಮಾಜಿಕ ಸುಸ್ಥಿತಿ ಹಾಗೂ ಸೌಹಾರ್ದತೆಗಾಗಿ ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕಿನ ನಡುವಿನ ಸಮತೋಲನ ತುಂಬಾ ಮುಖ್ಯವಾಗಿದೆ” ಎಂದು ರವಿವಾರ ಎಕ್ಸ್ ನಲ್ಲಿ ಕಾರ್ತಿ ಎಂ. ಚಿದಂಬರಂ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ, ಭಾರತವು ವಾರದಲ್ಲಿ 4 ದಿನಗಳ ಕೆಲಸಕ್ಕೆ ಬದಲಾಗಬೇಕು ಎಂದೂ ಅವರು ಹೇಳಿದ್ದಾರೆ. “ಸೋಮವಾರ ಮಧ್ಯಾಹ್ನ 12ರಿಂದ ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಕೆಲಸದ ಅವಧಿ ಇರಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಕೆಲಸದ ಅವಧಿ ದೀರ್ಘವಾಗಿರಬೇಕು ಎಂಬ ಐಟಿ ದಿಗ್ಗಜ ನಾರಾಯಣಮೂರ್ತಿಯವರ ಅನಿಸಿಕೆಗೆ ತಮ್ಮ ಪಕ್ಷದ ಸಹೋದ್ಯೋಗಿ ಗೌರವ್ ಗೊಗೊಯಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಬೆನ್ನಿಗೇ, ಕಾರ್ತಿ ಚಿದಂಬರಂ ಕೂಡಾ ಅವರ ಅನಿಸಿಕೆಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.