"ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಮೋದಿಗೆ ತಿಳಿದಿತ್ತು": ಕೆನಡಾದ ಪತ್ರಿಕೆಯೊಂದರ ವರದಿಯನ್ನು ತಳ್ಳಿ ಹಾಕಿದ ಭಾರತ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ / ಭಾರತದ ಪ್ರಧಾನಿ ನರೇಂದ್ರ ಮೋದಿ (Photo credit: AP)
ಹೊಸದಿಲ್ಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿತ್ತು ಎಂಬ ಕೆನಡಾದ ಪತ್ರಿಕೆಯೊಂದರ ವರದಿಯನ್ನು ಭಾರತ ತಳ್ಳಿ ಹಾಕಿದ್ದು, ಈ ಆರೋಪವು ಹಾಸ್ಯಾಸ್ಪದವಾಗಿದೆ ಮತ್ತು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಪ್ರಧಾನಿಯ ಘನತೆಗೆ ಧಕ್ಕೆ ತರುವ ತಂತ್ರವಾಗಿದೆ ಎಂದು ಹೇಳಿದೆ.
ಕೆನಡಾದ ಗ್ಲೋಬ್ ಮತ್ತು ಮೇಲ್ ಪತ್ರಿಕೆ(GLOBE AND MAIL NEWSPAPER) ಈ ಕುರಿತು ವರದಿಯನ್ನು ಮಾಡಿದ್ದು, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನ ಬಗ್ಗೆ ಮೋದಿಗೆ ತಿಳಿದಿತ್ತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಕೂಡ ಈ ಸಂಚಿನ ಕುಣಿಕೆಯಲ್ಲಿದ್ದಾರೆ ಎಂದು ಕೆನಡಾದ ಅಧಿಕಾರಿಯೋರ್ವರು ಹೇಳಿರುವುದಾಗಿ ವರದಿ ಮಾಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕೆನಡಾ ಸರ್ಕಾರದ ಮೂಲವೊಂದು ಪತ್ರಿಕೆಗೆ ನೀಡಿದ ಇಂತಹ ಹಾಸ್ಯಾಸ್ಪದ ಹೇಳಿಕೆಗಳು ಖಂಡನೀಯ, ಇಂತಹ ಸುಳ್ಳು ಪ್ರಚಾರಗಳು ಈಗಾಗಲೇ ಹದಗೆಟ್ಟಿರುವ ಸಂಬಂಧಗಳನ್ನು ಇನ್ನಷ್ಟು ಹಾನಿಗೊಳಿಸುತ್ತವೆ ಎಂದು ಹೇಳಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪದ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಕೈವಾಡದ ಬಗ್ಗೆ ʼವಾಷಿಂಗ್ಟನ್ ಪೋಸ್ಟ್ʼ ಇತ್ತೀಚೆಗೆ ವರದಿ ಮಾಡಿತ್ತು. ವಾಷಿಂಗ್ಟನ್ ಪೋಸ್ಟ್ ಗೆ ತಾನೇ ಮಾಹಿತಿ ನೀಡಿದ್ದಾಗಿ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದರು. ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಕೇಳಲಾದ ಪ್ರಶ್ನೆಗೆ ಡೇವಿಡ್ ಮಾರಿಸನ್ ನೀಡಿದ್ದ ಈ ಉತ್ತರ ಭಾರೀ ಚರ್ಚೆಗೆ ಕಾರಣವಾಗಿತ್ತು.