ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ 85ನೇ ಸ್ಥಾನಕ್ಕೆ ಜಾರಿದ ಭಾರತ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2024ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು ಬಿಡುಗಡೆಗೊಂಡಿದ್ದು, ಫ್ರಾನ್ಸ್ ಅಗ್ರಸ್ಥಾನದಲ್ಲಿದೆ. ಆದರೆ ಭಾರತದ ಪಾಸ್ಪೋರ್ಟ್ ಶ್ರೇಯಾಂಕವು ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಕ್ಕೆ ಜಾರಿದ್ದು, 84ರಿಂದ 85ಕ್ಕೆ ತೃಪ್ತಿಪಟ್ಟುಕೊಂಡಿದೆ.
ಕಳೆದ ವರ್ಷ ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿದವರು 60 ದೇಶಗಳಿಗೆ ವೀಸಾಮುಕ್ತ ಪ್ರಯಾಣ ಕೈಗೊಳ್ಳಬಹುದಿತ್ತು, ಅದು ಈ ವರ್ಷ 62ಕ್ಕೇರಿದೆ. ಹೀಗಾಗಿ ಭಾರತದ ಶ್ರೇಯಾಂಕ ಕುಸಿದಿರುವುದು ಅಚ್ಚರಿಯನ್ನು ಮೂಡಿಸಬಹುದು.
ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕವು ದೇಶಗಳ ಪಾಸ್ಪೋರ್ಟ್ಗಳ ಸಾಮರ್ಥ್ಯವನ್ನು ಆಧರಿಸಿ ಅವುಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ. 194 ದೇಶಗಳಿಗೆ ವೀಸಾಮುಕ್ತ ಪ್ರವೇಶವನ್ನು ನೀಡುವ ತನ್ನ ಪಾಸ್ಪೋರ್ಟ್ ಮೂಲಕ ಫ್ರಾನ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಫ್ರಾನ್ಸ್ ಜೊತೆಗೆ ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್ ಕೂಡ್ ಅಗ್ರ ಶ್ರೇಯಾಂಕಿತ ದೇಶಗಳಲ್ಲಿ ಸೇರಿವೆ.
ಪಾಕಿಸ್ತಾನವು ತನ್ನ ಕಳೆದ ವರ್ಷದ 106ನೇ ಸ್ಥಾನವನ್ನು ಈ ವರ್ಷವೂ ಕಾಯ್ದುಕೊಂಡಿದ್ದರೆ ಬಾಂಗ್ಲಾದೇಶ 101ರಿಂದ 102ನೇ ಸ್ಥಾನಕ್ಕೆ ಕುಸಿದಿದೆ.
ಭಾರತದ ನೆರೆಯ ದೇಶ ಮಾಲ್ದೀವ್ಸ್ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿರುವ ದೇಶವಾಗಿ ಮುಂದುವರಿದಿದ್ದು, ಅದು ತನ್ನ 58ನೇ ಶ್ರೇಯಾಂಕವನ್ನು ಕಾಯ್ದುಕೊಂಡಿದೆ. ಮಾಲ್ದಿವ್ಸ್ ಪಾಸ್ಪೋರ್ಟ್ ಹೊಂದಿರುವವರು 96 ದೇಶಗಳಿಗೆ ವೀಸಾಮುಕ್ತ ಪ್ರವಾಸವನ್ನು ಕೈಗೊಳ್ಳಬಹುದು.