ನಾಳೆ ಭಾರತ- ದಕ್ಷಿಣ ಆಫ್ರಿಕಾ ಎರಡನೇ ಟ್ವೆಂಟಿ-20 ಪಂದ್ಯ: ಮಳೆ ಭೀತಿ
Photo: PTI
ಜೋಹಾನ್ಸ್ ಬರ್ಗ್: ಡರ್ಬನ್ ನಲ್ಲಿ ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾದ ನಂತರ ಮಂಗಳವಾರ ನಿಗದಿಯಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲೂ ಭಾರತೀಯ ಕ್ರಿಕೆಟ್ ತಂಡ ಮಳೆ ಭೀತಿ ಎದುರಿಸುತ್ತಿದೆ. ಉಭಯ ತಂಡಗಳಿಗೆ ಮುಂಬರುವ ಟಿ-20 ವಿಶ್ವಕಪ್ ನಲ್ಲಿ ತಂಡವನ್ನು ಆಯ್ಕೆ ಮಾಡಲು ಇನ್ನು ಕೇವಲ 5 ಟಿ-20 ಪಂದ್ಯಗಳು ಮಾತ್ರ ಬಾಕಿ ಇದೆ.
ರವಿವಾರ ಭಾರೀ ಮಳೆಯಿಂದಾಗಿ ಭಾರತದ ಯುವ ಆಟಗಾರರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಹಾಗೂ ಗುರುವಾರ ನಿಗದಿಯಾಗಿರುವ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಮಳೆ ಅಡ್ಡಿಪಡಿಸದು ಎಂದು ಟೀಮ್ ಮ್ಯಾನೇಜ್ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಮಂಗಳವಾರ ಮಧ್ಯಾಹ್ನ ಸೈಂಟ್ ಜಾರ್ಜ್ ಪಾರ್ಕ್ ನಲ್ಲಿ ಮಳೆ ಮುನ್ಸೂಚನೆ ಇದೆ. 3ನೇ ಟಿ-20 ಪಂದ್ಯ ನಡೆಯುವ ಜೋಹಾನ್ಸ್ ಬರ್ಗ್ ನಲ್ಲೂ ಮಳೆ ಬರುವ ಲಕ್ಷಣ ವಿದೆ.
ರವಿವಾರ ಡರ್ಬನ್ ನಲ್ಲಿ ಪಂದ್ಯ ಮಳೆಗಾಹುತಿಯಾಗಿದ್ದಲ್ಲದೆ ಟಾಸ್ ಚಿಮ್ಮಿಸಲು ಸಾಧ್ಯವಾಗಲಿಲ್ಲ. ಮುಂಬರುವ ಪಂದ್ಯದಲ್ಲೂ ಮಳೆರಾಯ ಕಾಡುವ ಕುರಿತ ಮುನ್ಸೂಚನೆ ಲಭಿಸಿದೆ.
► ಭಾರತೀಯ ಯುವ ಆಟಗಾರರಿಗೆ ಸೀಮಿತ ಅವಕಾಶ
2024ರ ಜೂನ್ ನಲ್ಲಿ ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ-20 ವಿಶ್ವಕಪ್ ಗಿಂತ ಮೊದಲು ಭಾರತವು ಕೇವಲ 5 ಟಿ-20 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಯುವ ಆಟಗಾರರಿಗೆ ತಮ್ಮ ಶಕ್ತಿ-ಸಾಮರ್ಥ್ಯ ಪ್ರದರ್ಶಿಸಲು ಹಾಗೂ ಟೀಮ್ ಮ್ಯಾನೇಜ್ಮೆಂಟ್ ಗೆ ತಂಡವನ್ನು ಅಂತಿಮಗೊಳಿಸಲು ಸೀಮಿತ ಅವಕಾಶವಿದೆ.
ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ 17 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಉಳಿದಿರುವ ಪಂದ್ಯಗಳಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ.
► ಸ್ಪರ್ಧಿಗಳಿಗೆ ಐಪಿಎಲ್ ಟೂರ್ನಿಯೇ ನಿರ್ಣಾಯಕ
ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಟಿ-20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆಯಿದೆ. ವಿಶ್ವಕಪ್ ಆಯ್ಕೆಗೆ ಫಾರ್ಮ್ ಅತ್ಯಂತ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಇತರ ಆಟಗಾರರು ವಿಶೇಷವಾಗಿ ಐಪಿಎಲ್ ನಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಸವಾಲನ್ನು ಎದುರಿಸುತ್ತಿದ್ದಾರೆ.
ಒಂದು ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ವಕಪ್ ಗೆ ಸ್ವತಃ ಲಭ್ಯವಿದ್ದರೆ ಈಗಾಗಲೇ ಉತ್ತಮ ರನ್ ಗಳಿಸುತ್ತಿರುವ ಹೊರತಾಗಿಯೂ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ವಿಶ್ವಕಪ್ ನಲ್ಲಿ ತಮ್ಮ ಅವಕಾಶ ವನ್ನು ಹೆಚ್ಚಿಸಿಕೊಳ್ಳಲು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.
► ಕಡಿಮೆ ಟಿ-20 ಪಂದ್ಯಗಳ ಕುರಿತು ಪ್ರಶ್ನೆ
ವಿಶ್ವಕಪ್ ಗಿಂತ ಮೊದಲು ಭಾರತವು ಮುಂದಿನ ತಿಂಗಳು ಸ್ವದೇಶದಲ್ಲಿ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ಟಿ-20 ವಿಶ್ವಕಪ್ಗಿಂತ ಮೊದಲು ಕಡಿಮೆ ಟಿ-20 ಪಂದ್ಯಗಳನ್ನು ಆಯೋಜಿಸಿರುವ ಕುರಿತು ಪ್ರಶ್ನೆ ಎದ್ದಿದೆ. ಆಯ್ಕೆ ಸಮಿತಿ ಭಾರತದ ವಿಶ್ವಕಪ್ ತಂಡವನ್ನು ಅಂತಿಮಗೊಳಿಸಲು ಐಪಿಎಲ್ ಪ್ರದರ್ಶನವನ್ನೇ ಹೆಚ್ಚು ನೆಚ್ಚಿಕೊಳ್ಳಬೇಕಾಗಿದೆ.
► ಬೌಲಿಂಗ್ ದಾಳಿಯಲ್ಲಿ ಸಾಕಷ್ಟು ಅವಕಾಶ ಲಭ್ಯ
ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಹಲವು ಜಾಗ ಖಾಲಿ ಉಳಿದಿದೆ. ಪುನರಾಗಮನದ ನಿರೀಕ್ಷೆಯಲ್ಲಿರುವ ದೀಪಕ್ ಚಹಾರ್ ತುರ್ತು ವೈಯಕ್ತಿಕ ಕಾರಣಕ್ಕೆ ಸದ್ಯ ಲಭ್ಯವಿಲ್ಲ.
ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಹಾಗೂ ರವಿ ಬಿಷ್ಣೋಯ್ ಸರಣಿಯಲ್ಲಿ ಉತ್ತಮ ಫಾರ್ಮ್ ಮುಂದುವರಿಸುವ ಗುರಿ ಇಟ್ಟುಕೊಂಡಿದ್ದಾರೆ. ಏಕದಿನ ವಿಶ್ವಕಪ್ ನಂತರ ವಿಶ್ರಾಂತಿ ಪಡೆದಿದ್ದ ರವೀಂದ್ರ ಜಡೇಜ ತಂಡಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ.
► ದಕ್ಷಿಣ ಆಫ್ರಿಕಾ ತಂಡದಲ್ಲೂ ಅದೇ ಸಮಸ್ಯೆ
ದಕ್ಷಿಣ ಆಫ್ರಿಕಾ ತಂಡ ಕೂಡ ಟಿ-20 ವಿಶ್ವಕಪ್ ಗೆ ತನ್ನ ತಂಡ ಅಂತಿಮಗೊಳಿಸುವ ಮೊದಲು ಕೇವಲ 5 ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಲು ಬಾಕಿ ಇದೆ. ಟೂರ್ನಮೆಂಟ್ ಗಿಂತ ಮೊದಲು ವೆಸ್ಟ್ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ದಕ್ಷಿಣ ಆಫ್ರಿಕಾ ಟಿ-20 ಟೂರ್ನಿಯಲ್ಲಿ ಆಟಗಾರರ ನೀಡುವ ಪ್ರದರ್ಶನವನ್ನು ಅವಲಂಬಿಸಿದೆ.
ಮೊದಲೆರಡು ಪಂದ್ಯಗಳಿಗೆ ಆಯ್ಕೆಯಾಗಿರುವ ವೇಗಿದ್ವಯರಾದ ಮಾರ್ಕೊ ಜಾನ್ಸನ್ ಹಾಗೂ ಜೆರಾಲ್ಡ್ ಕೊಯೆಟ್ಝಿ ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾದ ಕಾರಣ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸೀಮಿತ ಅವಕಾಶಗಳನ್ನು ಹೊಂದಿದ್ದಾರೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ಕೀಪರ್), ಜಿತೇಶ್ ಶರ್ಮಾ(ವಿಕೆಟ್ಕೀಪರ್), ರವೀಂದ್ರ ಜಡೇಜ(ಉಪ ನಾಯಕ), ವಾಶಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ದೀಪಕ್ ಚಹಾರ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಒಟ್ನಿಯೆಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರೀಝ್ಕೆ, ನಾಂಡ್ರೆ ಬರ್ಗೆರ್, ಜೆರಾಲ್ಡ್ ಕೊಯೆಟ್ಝಿ(ಮೊದಲ, 2ನೇ ಟಿ-20), ಡೊನೊವನ್ ಫೆರೇರ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್(ಮೊದಲ, 2ನೇ ಟಿ-20), ಹೆನ್ರಿಕ್ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ತಬ್ರೈಝ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಲಿಝಾದ್ ವಿಲಿಯಮ್ಸ್.
ಪಿಚ್ ಹಾಗೂ ವಾತಾವರಣ
ಮತ್ತೊಮ್ಮೆ ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದೆ. ಮಂಗಳವಾರ ಮಧ್ಯಾಹ್ನ ಸೈಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ನಲ್ಲಿ ಮಳೆಯಾಗುವ ಮುನ್ಸೂಚನೆ ಲಭಿಸಿದೆ.
ಸೈಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಮ್ ಈ ತನಕ ಕೇವಲ ಎರಡು ಟಿ-20 ಪಂದ್ಯಗಳ ಆತಿಥ್ಯವಹಿಸಿದೆ. 2007ರಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ಇಂಡೀಸ್ ವಿರುದ್ಧ ಸೋತಿತ್ತು. 2020ರಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲುವು ದಾಖಲಿಸಿತ್ತು.
ಅಂಕಿ-ಅಂಶ
► ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ ಹಿಂದಿನ 4 ಟ್ವೆಂಟಿ-20 ಸರಣಿಗಳ ಪೈಕಿ ಎರಡರಲ್ಲಿ ಜಯ ಸಾಧಿಸಿದ್ದು, ಇನ್ನೆರಡು ಸರಣಿಗಳು ಡ್ರಾಗೊಂಡಿವೆ. ದಕ್ಷಿಣ ಆಫ್ರಿಕಾವು 2015ರ ಅಕ್ಟೋಬರ್ ನಲ್ಲಿ ಕೊನೆಯ ಬಾರಿ ಟಿ-20 ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸಿತ್ತು.
► ಅರ್ಷದೀಪ್ ಸಿಂಗ್ ಈ ವರ್ಷ ಭಾರತದ ಪ್ರಮುಖ ಟಿ-20 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ಅರ್ಷದೀಪ್ 23.68ರ ಸರಾಸರಿಯಲ್ಲಿ ಒಟ್ಟು 25 ವಿಕೆಟ್ಗಳನ್ನು ಕಬಳಿಸಿದ್ದಾರೆ.
► ಡೇವಿಡ್ ಮಿಲ್ಲರ್ ಮಂಗಳವಾರ ದಕ್ಷಿಣ ಆಫ್ರಿಕಾದ ಪರ 100ನೇ ಟಿ-20 ಇನಿಂಗ್ಸ್ ಆಡಲು ಸಜ್ಜಾಗಿದ್ದಾರೆ. ಈ ವರೆಗೆ ಅವರು ಆಡಿರುವ 99 ಇನಿಂಗ್ಸ್ ಗಳಲ್ಲಿ 106 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ಮಿಲ್ಲರ್ ಸಿಡಿಸಿದ್ದಷ್ಟು ಸಿಕ್ಸರ್ ಗಳನ್ನು ಯಾರೂ ಸಿಡಿಸಿಲ್ಲ.
ಪಂದ್ಯ ಆರಂಭದ ಸಮಯ: ರಾತ್ರಿ 8:30
(ಭಾರತದ ಕಾಲಮಾನ)