ಜರ್ಮನಿ, ಜಪಾನ್ ದೇಶಗಳನ್ನು ಹಿಂದಿಕ್ಕಿ 3ನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿರುವ ಭಾರತ!

ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತದ ಆರ್ಥಿಕತೆ ಸದ್ಯಕ್ಕೆ ವಿಶ್ವದಲ್ಲಿ 5ನೇ ದೊಡ್ಡ ಆರ್ಥಿಕತೆಯಾಗಿದ್ದು, ಸದ್ಯದಲ್ಲೇ ಜರ್ಮನಿ ಮತ್ತು ಜಪಾನ್ ದೇಶಗಳನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪುಗೊಳ್ಳಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ನಾಮಿನಲ್ ಜಿಡಿಪಿ ಶೇಕಡ 100ರಷ್ಟು ಪ್ರಗತಿ ಸಾಧಿಸಿದೆ. ಆದರೆ ಐಎಂಎಫ್ ನ 2025ರ ಅಂದಾಜಿನ ಪ್ರಕಾರ, ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾದ ಆರ್ಥಿಕತೆಗಳು ಭಾರತದ ಆರ್ಥಿಕತೆಯ ಗಾತ್ರಕ್ಕಿಂತ ಕ್ರಮವಾಗಿ 7.3 ಪಟ್ಟು ಹಾಗೂ 4.6 ಪಟ್ಟು ದೊಡ್ಡದಾಗಿರುತ್ತವೆ.
ಅಮೆರಿಕದ ಆರ್ಥಿಕತೆಯ ಗಾತ್ರ 2025ರಲ್ಲಿ 30507.217 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಅಂತೆಯೇ ಚೀನಾದ ಆರ್ಥಿಕತೆಯ ಗಾತ್ರ 18,231.705 ಶತಕೋಟಿ ಡಾಲರ್ ಗಳಾಗಲಿವೆ. 4744.804 ಡಾಲರ್ ಗಳೊಂದಿಗೆ ಜರ್ಮನಿ ಆರ್ಥಿಕತೆ ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ಆರ್ಥಿಕತೆಯ ಗಾತ್ರ 4,186.341 ಡಾಲರ್ ಗಳು ಎಂದು ಐಎಂಎಫ್ ನ ಡಬ್ಲ್ಯುಇಓ ಅಂದಾಜಿಸಿದೆ.
ಐದನೇ ಸ್ಥಾನದಲ್ಲಿರುವ ಭಾರತದ ಆರ್ಥಿಕತೆಯ ಪ್ರಸಕ್ತ ಗಾತ್ರ 4187 ಶತಕೋಟಿ ಡಾಲರ್ ಆಗಿದ್ದು, ಭಾರತ ಶೀಘ್ರದಲ್ಲೇ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದೆ. 2026ರಲ್ಲಿ 4601.225 ಶತಕೋಟಿ ಡಾಲರ್ ನೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೇರಲಿದ್ದು, 2028ರಲ್ಲಿ 5584.476 ಶತಕೋಟಿ ಡಾಲರ್ ನೊಂದಿಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.
ಬ್ರಿಟನ್ (3839.18 ಶತಕೋಟಿ ಡಾಲರ್), ಫ್ರಾನ್ಸ್ (3211.292 ಶತಕೋಟಿ ಡಾಲರ್), ಇಟೆಲಿ (2422.855 ಶತಕೋಟಿ ಡಾಲರ್), ಕೆನಡಾ (2225.341 ಶತಕೋಟಿ ಡಾಲರ್) ಹಾಗೂ ಬ್ರೆಝಿಲ್ (2125.958 ಶತಕೋಟಿ ಡಾಲರ್) ಅನುಕ್ರಮವಾಗಿ ಅಗ್ರ 10ರಲ್ಲಿ ಸ್ಥಾನ ಪಡೆದಿವೆ.