"ದಾರಿ ತಪ್ಪಿಸುವ ಸಂದರ್ಶನ ಪ್ರಸಾರ": ʼಇಂಡಿಯಾ ಟುಡೆʼ, ನಿರೂಪಕ ರಾಹುಲ್ ಕನ್ವಲ್ ವಿರುದ್ಧ ಶಿವಸೇನೆ ನಾಯಕಿ ಆರೋಪ
ರಾಹುಲ್ ಕನ್ವಲ್(X \ @rahulkanwal) , ಪ್ರಿಯಾಂಕಾ ಚತುರ್ವೇದಿ (X \ Priyanka Chaturvedi)
ಮುಂಬೈ: ನನ್ನನ್ನು ತಪ್ಪಾಗಿ ಬಿಂಬಿಸುವಂತೆ ದಾರಿ ತಪ್ಪಿಸುವ ಸಂದರ್ಶನವನ್ನು ಪ್ರಸಾರ ಮಾಡಲಾಗಿದೆ ಎಂದು ʼಇಂಡಿಯಾ ಟುಡೆʼ, ನಿರೂಪಕ ರಾಹುಲ್ ಕನ್ವಲ್ ವಿರುದ್ಧ ಶಿವಸೇನೆ (ಉದ್ಧವ್ ಠಾಕ್ರೆ) ನಾಯಕಿ ಪ್ರಿಯಾಂಕಾ ಚತುರ್ವೇದಿ ಮಂಗಳವಾರ ಆರೋಪಿಸಿದ್ದಾರೆ.
ರಾಹುಲ್ ಕನ್ವಲ್ ಇಂಡಿಯಾ ಟುಡೆ ಸುದ್ದಿ ಸಂಸ್ಥೆಯ ಸುದ್ದಿ ನಿರ್ದೇಶಕರಾಗಿದ್ದಾರೆ.
ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆಗೆ ಸಂಬಂಧಿಸಿದಂತೆ ಸೋಮವಾರ ಪ್ರಿಯಾಂಕಾ ಚತುರ್ವೇದಿ ಅವರು ʼಇಂಡಿಯಾ ಟುಡೆʼ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದರು.
ಆದರೆ, ಈ ಸಂದರ್ಶನದ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಚತುರ್ವೇದಿ, "ಕನ್ವಲ್ ತಮ್ಮ ಶೋನಲ್ಲಿ ಮುಖಾಮುಖಿ ಸಂದರ್ಶನಕ್ಕೆ ಬರುವಂತೆ ನನ್ನನ್ನು ಆಹ್ವಾನಿಸಿದ್ದರು. ಮುಂಬೈನಲ್ಲಿ ನಡೆದ ಬಾಬಾ ಸಿದ್ದೀಕಿ ಅವರ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ನೇರ ಪ್ರಸಾರ, ಮುಖಾಮುಖಿ ಮಾತುಕತೆ ಹಾಗೂ ಚರ್ಚೆಗೆ ಈ ಸಂದರ್ಶನ ಸಂಬಂಧಿಸಿರಬಾರದು ಎಂಬ ಷರತ್ತಿನ ಮೇಲೆ ನಾನು ಮುಖಾಮುಖಿ ಸಂದರ್ಶನಕ್ಕೆ ಅನುಮತಿ ನೀಡಿದ್ದೆ" ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಶನವನ್ನು ಸೋಮವಾರ ಸಂಜೆ 5 ಗಂಟೆಗೆ ಚತುರ್ವೇದಿ ಅವರ ಕಚೇರಿಯಲ್ಲಿ ಚಿತ್ರೀಕರಿಸಿಕೊಳ್ಳಲಾಗಿತ್ತು.
"ಚರ್ಚೆಯ ರೂಪದಲ್ಲಿ ನನ್ನನ್ನು ತಪ್ಪಾಗಿ ಪ್ರದರ್ಶಿಸಿದ್ದು ಕಂಡು ನನಗೆ ಗಾಬರಿಯಾಯಿತು. ಅದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಹಾಳಾಗಿರುವ ವರ್ಚಸ್ಸನ್ನು ಸರಿಪಡಿಸಲು ಯತ್ನಿಸುತ್ತ, ಮಹಾರಾಷ್ಟ್ರದಲ್ಲಿನ ಕಾನೂನು ರಾಹಿತ್ಯ ಸ್ಥಿತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಎದುರು ಪಕ್ಷದವರ ಎಲ್ಲ ನಿಲುವಿಗೆ ನಾನು ಅನುಮತಿ ನೀಡುತ್ತಿರುವಂತೆ ಹಾಗೂ ಒಪ್ಪಿಕೊಳ್ಳುತ್ತಿರುವಂತೆ ನನ್ನನ್ನು ಬಿಂಬಿಸಲಾಯಿತು" ಎಂದು ಚತುರ್ವೇದಿ ಆರೋಪಿಸಿದ್ದಾರೆ.
"ಆ ಪ್ರಸಾರದಲ್ಲಿ ಏನು ಮಾಡಲಾಗಿದೆ ಅದು ದಾರಿ ತಪ್ಪಿಸುವಂತಿರುವುದು, ಅನೈತಿಕವಾಗಿರುವುದು ಮಾತ್ರವಲ್ಲ, ಅಲ್ಲಿ ಏನೂ ಇರದಿದ್ದರೂ, ಒಂದು ಮಾತುಕತೆಯನ್ನು ವಂಚಕ ಮಾರ್ಗದಲ್ಲಿ ಪ್ರದರ್ಶಿಸಲಾಗಿದೆ. ಈ ಸಂಗತಿಯನ್ನು ನಾನು ನಿಮ್ಮ (ರಾಹುಲ್ ಕನ್ವಲ್) ಗಮನಕ್ಕೆ ತಂದಾಗ, ನೀವು ಕ್ಷಮೆ ಯಾಚಿಸಿದಿರಿ. ಆದರೆ, ನೀವು ದಾರಿ ತಪ್ಪಿಸುವ ಕಾರ್ಯಕ್ರಮವನ್ನು ಅಳಿಸಿ ಹಾಕುವ ಬದಲು, ನನ್ನ ಟ್ವೀಟ್ ಅಳಿಸಿ ಹಾಕಬೇಕು ಎಂದು ಬಯಸಿದ್ದರಿಂದ ನಿರಾಶಳಾಗಿದ್ದೇನೆ" ಎಂದೂ ಅವರು ಹೇಳಿದ್ದಾರೆ.
ʼಇಂಡಿಯಾ ಟುಡೆʼ ಸುದ್ದಿ ಸಂಸ್ಥೆಯಲ್ಲಿ ಇದೇ ಪ್ರಥಮ ಬಾರಿಗೆ ಇಂತಹ ದಾರಿ ತಪ್ಪಿಸುವ ಕಾರ್ಯಕ್ರಮ ಪ್ರಸಾರವಾಗಿರುವುದಲ್ಲ. ಹೀಗಾಗಿ, ಆ ಸಂದರ್ಶನ ಕಾರ್ಯಕ್ರಮದ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದರೊಂದಿಗೆ, ಉದ್ದೇಶಪೂರ್ವಕ ತಿರುಚುವಿಕೆ ಹಾಗೂ ಕಾರ್ಯಕ್ರಮದಲ್ಲಿನ ನನ್ನ ಭಾಗವಹಿಸುವಿಕೆಯನ್ನು ಅನೈತಿಕವಾಗಿ ನಿಭಾಯಿಸಿರುವುದರಿಂದ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದೂ ಪ್ರಿಯಾಂಕಾ ಚತುರ್ವೇದಿ ಆಗ್ರಹಿಸಿದ್ದಾರೆ.
ʼಇಂಡಿಯಾ ಟುಡೆʼ ಸುದ್ದಿ ಸಂಸ್ಥೆ ಪತ್ರಿಕೋದ್ಯಮದ ಉತ್ಕೃಷ್ಟ ಗುಣಮಟ್ಟವನ್ನು ಎತ್ತಿ ಹಿಡಿಯಲಿದೆ ಹಾಗೂ ತನ್ನ ತಪ್ಪನ್ನು ತಿದ್ದಿಕೊಳ್ಳಲಿದೆ ಎಂಬ ಆಶಾವಾದವನ್ನೂ ಸಂಸದರೂ ಆದ ಪ್ರಿಯಾಂಕಾ ಚತುರ್ವೇದಿ ವ್ಯಕ್ತಪಡಿಸಿದ್ದಾರೆ. "ಇಲ್ಲವಾದರೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಸದಸ್ಯೆಯಾಗಿ, ನನಗೆ ಲಭ್ಯವಿರುವ ಸೂಕ್ತ ವೇದಿಕೆಯ ಮೂಲಕ ತಿರುಚುವಿಕೆ ಹಾಗೂ ತಪ್ಪಾಗಿ ಬಿಂಬಿಸಿರುವುದರ ವಿರುದ್ಧ ದೂರು ನೀಡುವುದು ಅನಿವಾರ್ಯವಾಗಲಿದೆ" ಎಂದು ಅವರು ಎಚ್ಚರಿಸಿದ್ದಾರೆ.
ಅವರು ತಮ್ಮ ಹೇಳಿಕೆಯನ್ನು ಇಂಡಿಯಾ ಟುಡೆ ಸಮೂಹದ ಉಪಾಧ್ಯಕ್ಷರೂ ಆಗಿರುವ, ಇಂಡಿಯಾ ಟುಡೆ ಸುದ್ದಿ ಸಂಸ್ಥೆಯ ಕಾರ್ಯಕಾರಿ ಪ್ರಧಾನ ಸಂಪಾದಕ ಕಲ್ಲಿ ಪುರಿಗೂ ರವಾನಿಸಿದ್ದಾರೆ.