ಭಾರತ ವಿರೋಧಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ಬ್ರಿಟನ್ ಗೆ ಭಾರತ ಆಗ್ರಹ
Photo: Times Of India
ಹೊಸದಿಲ್ಲಿ: ಪರಸ್ಪರ ಸಹಕಾರವನ್ನು ಹೆಚ್ಚಿಸುವುದು ಮತ್ತು ಹಿಂಸಾತ್ಮಕ ಉಗ್ರವಾದ ಮತ್ತು ಭಯೋತ್ಪಾದನೆಯ ಸಮಸ್ಯೆಯನ್ನು ನಿವಾರಿಸಲು ಪರಸ್ಪರ ಸಹಕರಿಸಲು ಭಾರತ ಹಾಗೂ ಬ್ರಿಟನ್ ಒಪ್ಪಿಕೊಂಡಿವೆ. ಪ್ರಜಾಪ್ರಭುತ್ವದಲ್ಲಿ ಇಂತಹ ಚಟುವಟಿಕೆಗಳಿಗೆ ಸಮರ್ಥನೆ ಇಲ್ಲ ಎಂದು ಅಭಿಪ್ರಾಯಪಟ್ಟಿವೆ.
ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಬ್ರಿಟನ್ ನ ಭದ್ರತಾ ಸಲಹೆಗಾರ ಟಿಪ್ ಬಾರ್ರೊ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಭೆಯಲ್ಲಿ ಬ್ರಿಟನ್ ನಲ್ಲಿ ಉಗ್ರಗಾಮಿತ್ವ ವಿಷಯವನ್ನು ಮುಂದಿಟ್ಟ ದೋವಲ್, ಭಾರತದ ಹೈಕಮಿಷನ್ ನ ಅಧಿಕಾರಿಗಳಿಗೆ ಭೀತಿ ಮೂಡಿಸುತ್ತಿರುವುದನ್ನು ಆಕ್ಷೇಪಿಸಿದರು. ಇಂತಹ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಬ್ರಿಟನ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಗಡಿಪಾರು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತದ ಹೈಕಮಿಷನ್ ಅಧಿಕಾರಿಗಳ ವಿರುದ್ಧದ ಯಾವುದೇ ದಾಳಿ ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್ ಗುರುವಾರ ಘೋಷಿಸಿತ್ತು.
ಭಯೋತ್ಪಾದನೆ ತಡೆಗೆ ಉಭಯ ದೇಶಗಳು ನಿಕಟವಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವುದು, ಭಯೋತ್ಪಾದನೆ ಉದ್ದೇಶಕ್ಕಾಗಿ ಇಂಟರ್ನೆಟ್ ಬಳಕೆ, ಅಕ್ರಮ ಮಾದಕ ವಸ್ತು ಕಳ್ಳಸಾಗಣೆಯನ್ನು ತಡೆಯಲು ಪರಸ್ಪರ ಸಹಕರಿಸಲು ಕೂಡಾ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದು ಬಂದಿದೆ.
ಭಾರತದ ಜತೆಗೆ ಕಾರ್ಯತಂತ್ರ ಸಂವಾದಕ್ಕಾಗಿ ಬ್ರಿಟನ್ ಭದ್ರತಾ ಸಲಹೆಗಾರ ಬಾರ್ರೊ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಬ್ರಿಟನ್ ಸರ್ಕಾರದ ಉನ್ನತ ಅಧಿಕಾರಿಗಳು ಕೂಡಾ ನಿಯೋಗದಲ್ಲಿ ಆಗಮಿಸಿದ್ದಾರೆ. ಉಭಯ ದೇಶಗಳಿಗೆ ಪ್ರಯೋಜನವಾಗುವ ಪ್ರಮುಖ ಹಾಗೂ ವಿಕಾಸಶೀಲ ತಂತ್ರಜ್ಞಾನಗಳಲ್ಲಿ ಪರಸ್ಪರ ಸಹಭಾಗಿತ್ವಕ್ಕೂ ಭಾರತ ಹಾಗೂ ಬ್ರಿಟನ್ ಒಪ್ಪಿಕೊಂಡಿವೆ ಎನ್ನಲಾಗಿದೆ.