ಭಾರತವು ಬಹುಸಂಖ್ಯಾತ ಜನರ ಇಚ್ಛೆಯಂತೆ ನಡೆಯುತ್ತದೆ: ವಿಹಿಂಪ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ
ನ್ಯಾ. ಶೇಖರ್ ಕುಮಾರ್ ಯಾದವ್ | PC : thehindu.com
ಅಲಹಾಬಾದ್: ಬಲಪಂಥೀಯ ಸಂಘಟನೆ ವಿಶ್ವ ಹಿಂದು ಪರಿಷತ್(ವಿಹಿಂಪ) ರವಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಶೇಖರ್ ಕುಮಾರ್ ಯಾದವ್ ಅವರು ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.
‘ಇದು ಭಾರತ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ಈ ದೇಶವು ತನ್ನ ಬಹುಸಂಖ್ಯಾತ ಜನರ ಇಚ್ಛೆಯಂತೆ ನಡೆಯುತ್ತದೆ’ ಎಂದು ಹೇಳಿದ ನ್ಯಾ.ಯಾದವ್, ಮುಸ್ಲಿಮರು ತಮ್ಮ ಸಂಸ್ಕೃತಿಯನ್ನು ಅನುಸರಿಸಬೇಕೆಂದು ಹಿಂದುಗಳು ನಿರೀಕ್ಷಿಸಿಲ್ಲ, ಆದರೆ ಅವರು ಅದನ್ನು ಅಗೌರವಿಸಬಾರದು ಎಂದಷ್ಟೇ ಬಯಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಮಾತನಾಡಿದ ಅವರು, ಬಹುಪತ್ನಿತ್ವ, ತ್ರಿವಳಿ ತಲಾಖ್ ಅಥವಾ ಹಲಾಲಾಗೆ ಯಾವುದೇ ನೆಪ ಹೇಳುವಂತಿಲ್ಲ, ಇನ್ನು ಮುಂದೆ ಈ ಪದ್ಧತಿಗಳು ನಡೆಯುವುದಿಲ್ಲ ಎಂದು ಹೇಳಿದರು.
‘ನಾವು ನಮ್ಮ ಮಕ್ಕಳಿಗೆ ಹುಟ್ಟಿನಿಂದಲೂ ಸಹನೆ ಮತ್ತು ದಯೆಯನ್ನು ಕಲಿಸುತ್ತೇವೆ. ಪ್ರಾಣಿಗಳು, ಪ್ರಕೃತಿಯನ್ನು ಪ್ರೀತಿಸಲು ಅವರಿಗೆ ಕಲಿಸುತ್ತೇವೆ. ನಾವು ಇತರರ ನೋವಿನಿಂದ ದುಃಖಿತರಾಗುತ್ತೇವೆ. ಆದರೆ ನಿಮಗೆ ಹಾಗೆ ಅನ್ನಿಸುವುದಿಲ್ಲ. ನೀವು ನಿಮ್ಮ ಮಗುವಿನ ಕಣ್ಣೆದುರೇ ಪ್ರಾಣಿಗಳನ್ನು ವಧಿಸಿದಾಗ ಅದು ಸಹನೆ ಮತ್ತು ದಯೆಯನ್ನು ಹೇಗೆ ಕಲಿಯುತ್ತದೆ?’ ಎಂದು ಅವರು ಪ್ರಶ್ನಿಸಿದರು.
‘ನಾನೋರ್ವ ಹಿಂದು ಆಗಿರುವುದರಿಂದ ನನ್ನ ಧರ್ಮವನ್ನು ಗೌರವಿಸುತ್ತೇನೆ, ಆದರೆ ಇತರ ಧರ್ಮಗಳು ಅಥವಾ ನಂಬಿಕೆಗಳ ಬಗ್ಗೆ ನಾನು ಕೆಟ್ಟ ಭಾವನೆಯನ್ನು ಹೊಂದಿದ್ದೇನೆ ಎಂದು ಅರ್ಥವಲ್ಲ ಎಂದು ಹೇಳಿದ ನ್ಯಾ.ಯಾದವ್, ‘ನೀವು ಮದುವೆಯಾಗುವಾಗ ಸಪ್ತಪದಿ ತುಳಿಯಬೇಕು ಎಂದು ನಾವು ನಿರೀಕ್ಷಿಸುವುದಿಲ್ಲ, ನೀವು ಗಂಗಾನದಿಯಲ್ಲಿ ಮುಳುಗು ಹಾಕಬೇಕು ಎಂದು ನಾವು ಬಯಸುವುದಿಲ್ಲ. ಆದರೆ ನೀವು ನಮ್ಮ ದೇಶದ ಸಂಸ್ಕೃತಿ, ದೇವತೆಗಳು ಮತ್ತು ಮಹಾನ್ ನಾಯಕರಿಗೆ ಅಗೌರವ ತೋರಿಸಬಾರದು ಎಂದು ನಾವು ಬಯಸುತ್ತೇವೆ ’ ಎಂದರು.
ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು. ಹಿಂದು ಶಾಸ್ತ್ರಗಳು ಮತ್ತು ವೇದಗಳಲ್ಲಿ ದೇವತೆಯೆಂದು ಪರಿಗಣಿಸಲಾಗಿರುವ ಮಹಿಳೆಯನ್ನು ನೀವು ಅಗೌರವಿಸುವುದು ಸಾಧ್ಯವಿಲ್ಲ. ನೀವು ನಾಲ್ವರು ಪತ್ನಿಯರನ್ನು ಹೊಂದಲು, ಹಲಾಲಾ ಅಥವಾ ತ್ರಿವಳಿ ತಲಾಖ್ನ ಹಕ್ಕನ್ನು ಪ್ರತಿಪಾದಿಸುವಂತಿಲ್ಲ. ಮಹಿಳೆಯರಿಗೆ ಜೀವನಾಂಶ ನಿರಾಕರಣೆ ಮತ್ತು ಇತರ ಅನ್ಯಾಯಗಳು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಯುಸಿಸಿಯನ್ನು ಪ್ರತಿಪಾದಿಸುತ್ತಿರುವವರು ಆರೆಸ್ಸೆಸ್, ವಿಹಿಂಪ ಅಥವಾ ಹಿಂದುಗಳು ಮಾತ್ರವಲ್ಲ, ದೇಶದ ಸರ್ವೋಚ್ಚ ನ್ಯಾಯಾಲಯವೂ ಅದನ್ನು ಬೆಂಬಲಿಸುತ್ತಿದೆ ಎಂದರು.
ಸತಿ ಮತ್ತು ಬಾಲವಿವಾಹ ಸೇರಿದಂತೆ ಹಲವಾರು ಕೆಟ್ಟ ಪದ್ಧತಿಗಳನ್ನು ಹಿಂದು ಸಮಾಜವು ತೊಡೆದುಹಾಕಿದೆ ಎಂದು ಹೇಳಿದ ನ್ಯಾ.ಯಾದವ,‘ದೋಷಗಳನ್ನು ಒಪ್ಪಿಕೊಳ್ಳುವುದರಲ್ಲಿ ಮತ್ತು ಸಕಾಲದಲ್ಲಿ ಅವುಗಳನ್ನು ತಿದ್ದಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಾನು ಹೇಳಿದ್ದು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿಲ್ಲ. ಅದು ನಮಗೆಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಧರ್ಮವೂ ತನ್ನ ಎಲ್ಲ ಕೆಟ್ಟ ಮತ್ತು ದುಷ್ಟ ಪದ್ಧತಿಗಳನ್ನು ತಾನಾಗಿಯೇ ಕೈಬಿಡಬೇಕು. ಅವರು ಅದನ್ನು ಮಾಡದಿದ್ದರೆ ದೇಶವು ತನ್ನ ಎಲ್ಲ ನಾಗರಿಕರಿಗಾಗಿ ಸಾಮಾನ್ಯ ಕಾನೂನನ್ನು ತರುತ್ತದೆ ’ ಎಂದು ಹೇಳಿದರು.
ನ್ಯಾ.ದಿನೇಶ ಪಾಠಕ್ ಕೂಡ ಉಪಸ್ಥಿತರಿದ್ದು,ಕಾರ್ಯಕ್ರಮವನ್ನು ಉದ್ಘಾಟಿಸಿದರಾದರೂ ಭಾಷಣ ಮಾಡಲಿಲ್ಲ.
ಹಾಲಿ ನ್ಯಾಯಾಧೀಶರ ಭಾಗವಹಿಸುವಿಕೆಗಾಗಿ ವಿಹಿಂಪ ಕಾರ್ಯಕ್ರಮವು ಟೀಕೆಗೆ ಗುರಿಯಾಗಿದೆ.
‘ಹಿಂದು ಸಂಘಟನೆಯೊಂದು ತನ್ನ ರಾಜಕೀಯ ಅಜೆಂಡಾ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸಕ್ರಿಯವಾಗಿ ಭಾಗವಹಿಸಿದ್ದು ನಾಚಿಕೆಗೇಡು ’ ಎಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.