ಭಾರತ ಶೀಘ್ರವೇ ವಿಶ್ವದ ಮೂರು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲಿದೆ: ಪ್ರಧಾನಿ ಮೋದಿ
ಪ್ರಧಾನಿ ಮೋದಿ | Photo: PTI
ಅಹ್ಮದಾಬಾದ್: ಭಾರತವು ಇನ್ನು ಕೆಲವೇ ವರ್ಷಗಳಲ್ಲಿ ವಿಶ್ದದ ಮೂರು ಅಗ್ರಮಾನ್ಯ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಇಲ್ಲಿ ಹೇಳಿದರು. ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗದ 20 ವರ್ಷಗಳ ಸಂಭ್ರಮಾಚರಣೆಯ ಪ್ರಯುಕ್ತ ಅಹ್ಮದಾಬಾದ್ ನ ಸೈನ್ಸ್ ಸಿಟಿಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗವು 40 ವರ್ಷಗಳನ್ನು ಮುಗಿಸುವಾಗ ಭಾರತವು ತನ್ನ ಶತಮಾನೋತ್ಸವ ಸಂಭ್ರಮಾಚರಣೆಗೆ ಸಮೀಪವಿರುತ್ತದೆ ಎಂದು ಹೇಳಿದ ಮೋದಿ, ಮುಂದಿನ 20 ವರ್ಷಗಳು ಹೆಚ್ಚು ನಿರ್ಣಾಯಕವಾಗಿರಲಿವೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವುದನ್ನು ಸಾಧ್ಯವಾಗಿಸಲು ಮಾರ್ಗಸೂಚಿಯನ್ನು ರೂಪಿಸಲು ಇದು ಸಕಾಲವಾಗಿದೆ ಎಂದರು.
ಭಾರತವು ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಮೂರು ಅಗ್ರಮಾನ್ಯ ಆರ್ಥಿಕತೆಗಳಲ್ಲಿ ಒಂದಾಗಲಿದೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
‘ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಭಾರತದ ಬೆಳವಣಿಗೆಯ ಇಂಜಿನ್ ಆಗಬೇಕೆಂಬ ಚಿಂತನೆಯನ್ನು ಹೊಂದಿದ್ದೆ. 2014ರಲ್ಲಿ ದೇಶಕ್ಕೆ ಸೇವೆಯನ್ನು ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ದೂರದೃಷ್ಟಿ ವಿಸ್ತರಣೆಗೊಂಡಿದ್ದು,ಭಾರತವು ವಿಶ್ವಕ್ಕೆ ಬೆಳವಣಿಗೆಯ ಇಂಜಿನ್ ಆಗುವುದನ್ನು ನೋಡಲು ನಾನೀಗ ಬಯಸಿದ್ದೇನೆ ’ ಎಂದು ಮೋದಿ ಹೇಳಿದರು.
‘ನಾನು ಗುಜರಾತ್ ಮುಖ್ಯಮಂತ್ರಿಯಾದಾಗ ಮೊದಲ ಬಾರಿಯ ಶಾಸಕನಾಗಿದ್ದೆ ಮತ್ತು ಆಡಳಿತದ ಅನುಭವವಿರಲಿಲ್ಲ. 2003ರಲ್ಲಿ ಸುಮಾರು 300 ಪ್ರತಿನಿಧಿಗಳೊಂದಿಗೆ ಅಹ್ಮದಾಬಾದ್ನ ಟಾಗೋರ್ ಹಾಲ್ನಿಂದ ಆರಂಭಗೊಂಡ ವೈಬ್ರಂಟ್ ಗುಜರಾತ್ ಶೃಂಗದಲ್ಲಿ ಈಗ 135 ದೇಶಗಳು, 2000ಕ್ಕೂ ಅಧಿಕ ಪ್ರದರ್ಶನಕಾರರು ಮತ್ತು ಭಾರತ ಹಾಗೂ ವಿಶ್ವಾದ್ಯಂತದಿಂದ 40,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ’ ಎಂದರು.
2002ರ ಗೋಧ್ರಾ ನರಮೇಧ ಮತ್ತು ನಂತರದ ದಂಗೆಗಳನ್ನೂ ಮೋದಿ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು.