ಯೂನುಸ್ ಚೀನಾ ಮೋಹ,ಬಾಂಗ್ಲಾದೇಶಕ್ಕೆ ನೀಡಿದ್ದ ಸರಕು ಸಾಗಣೆ ಸೌಲಭ್ಯ ಹಿಂದೆಗೆದುಕೊಂಡ ಭಾರತ

ಹೊಸದಿಲ್ಲಿ: ಈಶಾನ್ಯ ಭಾರತವು ಬಾಂಗ್ಲಾದೇಶದಿಂದ ಸುತ್ತುವರಿದಿರುವ ಭೂಪ್ರದೇಶವಾಗಿದೆ ಮತ್ತು ಸಾಗರ ಪ್ರವೇಶಕ್ಕಾಗಿ ಅದು ತನ್ನ ದೇಶವನ್ನೇ ಅವಲಂಬಿಸಿದೆ ಎಂದು ಆ ದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ತನ್ನ ಇತ್ತೀಚಿನ ಚೀನಾ ಭೇಟಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಯ ಹಿನ್ನಲೆಯಲ್ಲಿ ಭಾರತವು ಬಾಂಗ್ಲಾದೇಶಕ್ಕೆ ನೀಡಿದ್ದ ಪ್ರಮುಖ ಸಾರಿಗೆ ಸೌಲಭ್ಯವನ್ನು ಹಿಂದೆಗೆದುಕೊಂಡಿದೆ. ಯೂನುಸ್ ಹೇಳಿಕೆ ತೀವ್ರ ರಾಜತಾಂತ್ರಿಕ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು.
ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಎ.೮ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರಕಟಿಸಿರುವ ನಿರ್ಧಾರವು ಜೂ.29,2020ರ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅಂತ್ಯಗೊಳಿಸಿದೆ. ಈ ಒಪ್ಪಂದದ ಮೂಲಕ ಬಾಂಗ್ಲಾದೇಶವು ತನ್ನ ಸರಕುಗಳನ್ನು ಭಾರತದ ಭೂ ಕಸ್ಟಮ್ಸ್ ಕೇಂದ್ರಗಳು,ನಂತರ ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ರಫ್ತು ಮಾಡುವ ಸೌಲಭ್ಯವನ್ನು ಪಡೆದುಕೊಂಡಿತ್ತು.
ಸೌಲಭ್ಯವು ತಕ್ಷಣದಿಂದಲೇ ರದ್ದುಗೊಂಡಿದೆ,ಆದರೆ ಬಾಂಗ್ಲಾ ದೇಶದಿಂದ ಈಗಾಗಲೇ ಭಾರತವನ್ನು ಪ್ರವೇಶಿಸಿರುವ ಸರಕುಗಳ ರಫ್ತಿಗೆ ಅವಕಾಶವನ್ನು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಸೌಲಭ್ಯವು ಭೂತಾನ,ನೇಪಾಳ ಮತ್ತು ಮ್ಯಾನ್ಮಾರ್ನೊಂದಿಗೆ ಬಾಂಗ್ಲಾದೇಶದ ವ್ಯಾಪಾರವನ್ನು ಸುಗಮಗೊಳಿಸಿತ್ತು.ಆದರೆ ಭಾರತೀಯ ರಫ್ತುದಾರರು, ವಿಶೇಷವಾಗಿ ಸಿದ್ಧ ಉಡುಪಗಳ ರಫ್ತುದಾರರು ಈ ವ್ಯವಸ್ಥೆಗೆ ಬಹು ಹಿಂದಿನಿಂದಲೂ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
ಪ್ರತಿದಿನ ಬಾಂಗ್ಲಾದೇಶದಿಂದ 20ರಿಂದ 30 ಟ್ರಕ್ ಗಳು ದಿಲ್ಲಿಗೆ ಆಗಮಿಸುತ್ತಿವೆ. ಇದು ಸರಕು ಟರ್ಮಿನಲ್ಗಳಲ್ಲಿ ಅಡಚಣೆಗೆ ಮತ್ತು ಸರಕು ಸಾಗಣೆ ವೆಚ್ಚ ಹೆಚ್ಚಾಗಲು ಕಾರಣವಾಗಿದೆ ಎಂದು ಉಡುಪು ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಸುಧೀರ್ ಸೇಖ್ರಿ ಅವರು ಈ ಹಿಂದೆ ಹೇಳಿದ್ದರು.
ಈಗ ನಮ್ಮ ಸರಕುಗಳ ರಫ್ತಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಈ ಹಿಂದೆ ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಸಾರಿಗೆ ಸೌಲಭ್ಯದಿಂದಾಗಿ ತಮಗೆ ಸ್ಥಳಾವಕಾಶ ಕೊರತೆಯ ಬಗ್ಗೆ ರಫ್ತುದಾರರು ದೂರುತ್ತಿದ್ದರು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಮಹಾ ನಿರ್ದೇಶಕ ಅಜಯ ಸಹಾಯ್ ಹೇಳಿದರು.
ಅಮೆರಿಕವು ಭಾರತ ಮತ್ತು ಬಾಂಗ್ಲಾದೇಶಗಳ ಮೇಲೆ ಹೊಸ ಸುಂಕಗಳನ್ನು ಪ್ರಕಟಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿರುವುದು ಬಾಂಗ್ಲಾದೇಶದ ರಫ್ತು ಲಾಜಿಸ್ಟಿಕ್ ಗೆ ಭಾರೀ ಹೊಡೆತವನ್ನು ನೀಡಲಿದೆ ಎಂದು ವ್ಯಾಪಾರ ತಜ್ಞರು ಹೇಳಿದ್ದಾರೆ. ಇನ್ನು ಮುಂದೆ ಬಾಂಗ್ಲಾದೇಶಿ ರಫ್ತುದಾರರು ವಿಳಂಬಗಳು, ಹೆಚ್ಚಿನ ವೆಚ್ಚಗಳು ಮತ್ತು ಅನಿರ್ದಿಷ್ಟತೆಯನ್ನು ಎದುರಿಸಬೇಕಾಗಬಹುದು ಎಂದಿದ್ದಾರೆ.
ಬೀಜಿಂಗ್ನಲ್ಲಿ ಯೂನುಸ್ ಹೇಳಿಕೆಯ ಬಳಿಕ ಭೂರಾಜಕೀಯ ಬೆಳವಣಿಗೆಯು ಅನಿವಾರ್ಯವಾಗಿತ್ತು. ಬಾಂಗ್ಲಾದೇಶದಿಂದ ಸುತ್ತುವರಿದಿರುವ ಈಶಾನ್ಯ ಭಾರತದ ಸಮುದ್ರ ಪ್ರವೇಶಕ್ಕೆ ನಾವು ಏಕೈಕ ಮಾರ್ಗವಾಗಿದ್ದೇವೆ ಎಂದು ಒತ್ತಿ ಹೇಳಿದ್ದ ಯನುಸ್, ಈ ಪ್ರದೇಶದಲ್ಲಿ ತನ್ನ ಆರ್ಥಿಕ ಉಪಸ್ಥಿತಿಯನ್ನು ಹೆಚ್ಚಿಸುವಂತೆ ಚೀನಾವನ್ನು ಆಹ್ವಾನಿಸಿದ್ದರು.