ಗಾಝಾ ಆಸ್ಪತ್ರೆ ಮೇಲೆ ದಾಳಿಯ ಹಿನ್ನೆಲೆ: ಇಸ್ರೇಲಿ ಪೋಲಿಸ್ ಪಡೆಗೆ ಸಮವಸ್ತ್ರಗಳ ಪೂರೈಕೆಯನ್ನು ನಿರಾಕರಿಸಿದ ಭಾರತದ ಉಡುಪು ತಯಾರಿಕೆ ಕಂಪನಿ
Photo credit: Thomas Olickal/thenationalnews.com
ಹೊಸದಿಲ್ಲಿ: ಗಾಝಾದಲ್ಲಿಯ ಆಸ್ಪತ್ರೆಯ ಮೇಲೆ ಬಾಂಬ್ದಾಳಿಯನ್ನು ಪ್ರತಿಭಟಿಸಿ ಇಸ್ರೇಲಿ ಪೋಲಿಸ್ ಪಡೆಗೆ ಸಮವಸ್ತ್ರಗಳನ್ನು ಪೂರೈಸುವ ಭಾರತದ ಉಡುಪು ತಯಾರಿಕೆ ಕಂಪನಿಯೊಂದು ಅದರೊಂದಿಗೆ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿದೆ ಎಂದು thenationalnews.com ವರದಿ ಮಾಡಿದೆ.
ಬಾಂಬ್ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸೇರಿದಂತೆ ಕನಿಷ್ಠ 450 ಜನರು ಸಾವನ್ನಪ್ಪಿದ್ದಾರೆ.
ಕೇರಳದ ಕಣ್ಣೂರಿನಲ್ಲಿರುವ ಮರಿಯನ್ ಅಪರೆಲ್ ಪ್ರೈ.ಲಿ. 2015ರಿಂದಲೂ ಇಸ್ರೇಲಿ ಪೋಲಿಸ್ ಪಡೆಗಾಗಿ ವಾರ್ಷಿಕ ಒಂದು ಲಕ್ಷ ಸಮವಸ್ತ್ರಗಳನ್ನು ತಯಾರಿಸುತ್ತಿದೆ.
ಇಸ್ರೇಲ್ನಿಂದ ಬಲವಂತದಿಂದ ಸ್ಥಳಾಂತರಗೊಳಿಸಲ್ಪಟ್ಟ ಸಾವಿರಾರು ಜನರಿಗೆ ಆಶ್ರಯವನ್ನು ಒದಗಿಸಿದ್ದ ಗಾಝಾ ನಗರದ ಹೃದಯಭಾಗದಲ್ಲಿರುವ ಅಲ್ ಅಹ್ಲಿ ಅರಬ್ ಹಾಸ್ಪಿಟಲ್ ಮೇಲೆ ಮಂಗಳವಾರ ರಾತ್ರಿ ಬಾಂಬ್ ದಾಳಿ ನಡೆದಿದ್ದು, ಮರುದಿನವೇ ಮರಿಯನ್ ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ.
"ಆಸ್ಪತ್ರೆಯ ಮೇಲಿನ ದಾಳಿಯು ನಮ್ಮನ್ನು ನಿಜಕ್ಕೂ ವಿಚಲಿತಗೊಳಿಸಿದೆ. ಮಕ್ಕಳು, ಮಹಿಳೆಯರು ಮತ್ತು ಸಾಮಾನ್ಯ ಜನರು ಸಾಯುತ್ತಿದ್ದಾರೆ” ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಕಂಪನಿಯ ನಿರ್ದೇಶಕ ಥಾಮಸ್ ಒಲಿಕ್ಕಲ್, ಅವರು ಆಹಾರ, ವಿದ್ಯುತ್ ಮತ್ತು ಆಸ್ಪತ್ರೆ ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ. ಇದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎರಡು ಸೇನೆಗಳು ಹೋರಾಡುವುದು ಸರಿ, ಆದರೆ ಸಾಮಾನ್ಯ ಜನರನ್ನು ಕೊಲ್ಲುವುದು ಸ್ವೀಕಾರಾರ್ಹವಲ್ಲ. ಇದೊಂದು ನೈತಿಕ ನಿರ್ಧಾರವಾಗಿದೆ ಎಂದರು.
“ಕಂಪನಿಯ ಪ್ರಸ್ತುತ ಬದ್ಧತೆಗಳನ್ನು ಸಾಮಾನ್ಯ ವ್ಯವಹಾರ ಒಪ್ಪಂದದಡಿ ಪೂರೈಸಲಾಗುತ್ತದೆ, ಆದರೆ ಶಾಂತಿ ನೆಲೆಸುವವರೆಗೆ ಮುಂದಿನ ಬೇಡಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ, ನಾವು ಈ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದೇವೆ” ಎಂದು ಹೇಳಿದರು.
ಅ.7ರಂದು ಇಸ್ರೇಲ್ ಮೇಲೆ ಹಮಾಸ್ ಹೋರಾಟಗಾರರ ದಿಢೀರ್ ದಾಳಿಯ ಬಳಿಕ ಮರಿಯನ್ ಕಂಪನಿಯು 50,000 ಹೆಚ್ಚುವರಿ ಸಮವಸ್ತ್ರಗಳಿಗಾಗಿ ಬೇಡಿಕೆಯನ್ನು ಸ್ವೀಕರಿಸಿತ್ತು. ದಾಳಿಯಲ್ಲಿ ಕನಿಷ್ಠ 1,400 ಜನರು ಮೃತಪಟ್ಟಿದ್ದರು.
ಕಳೆದೊಂದು ವಾರದಿಂದಲೂ ಎಲ್ಲರೂ ಮಹಿಳೆಯರೇ ಆಗಿರುವ ಸುಮಾರು 1,500 ಕಾರ್ಮಿಕರು ಬೇಡಿಕೆಯನ್ನು ಪೂರ್ಣಗೊಳಿಸಲು ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡುತ್ತಿದ್ದರು.
ಕಂಪನಿಯ ಕೇಂದ್ರ ಕಚೇರಿಯು ಮುಂಬೈನಲ್ಲಿದ್ದು, 2008ರಿಂದ ಸಮವಸ್ತ್ರ ತಯಾರಿಕೆ ಘಟಕವು ಕಣ್ಣೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಂಪನಿಯು ಪೆಟ್ರೋಲಿಯಂ ರಿಫೈನರಿಗಳು ಮತ್ತು ಆಸ್ಪತ್ರೆಗಳ ಸಿಬ್ಬಂದಿಗಳಿಗಾಗಿ ಅಗ್ನಿ ನಿರೋಧಕ ಸಮವಸ್ತ್ರಗಳ ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿದೆ.
ಕಂಪನಿಯು ಕುವೈತ್ನ ನ್ಯಾಷನಲ್ ಗಾರ್ಡ್ ಆ್ಯಂಡ್ ಫೈರ್ ಸರ್ವಿಸ್, ಕತರ್ ವಾಯುಪಡೆ, ಸೌದಿ ಅರೇಬಿಯಾದ ಅರಾಮ್ಕೋ ಮತ್ತು ಫಿಲಿಪ್ಪೀನ್ಸ್ಗಾಗಿಯೂ ಸಮವಸ್ತ್ರಗಳನ್ನು ತಯಾರಿಸುತ್ತದೆ.
“ನಾವು ಪ್ರತಿ ತಿಂಗಳು ಸುಮಾರು 2,50,000 ಸಮವಸ್ತ್ರಗಳನ್ನು ತಯಾರಿಸುತ್ತೇವೆ, ಆದರೆ ಇಸ್ರೇಲ್ನ ಬೇಡಿಕೆ ವಾರ್ಷಿಕ ಸುಮಾರು ಒಂದು ಲಕ್ಷದಷ್ಟಿದೆ. ಅದು ನಮ್ಮ ಒಟ್ಟು ವಹಿವಾಟಿನ ಕೇವಲ ಶೇ.2ರಿಂದ ಶೇ.3ರಷ್ಟಿದೆ. ಅದು ನಮ್ಮ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ” ಎಂದು ಒಲಿಕ್ಕಲ್ ತಿಳಿಸಿದರು.