ಒಂದೇ ದಿನದಲ್ಲಿ ಐದು ಲಕ್ಷ ಪ್ರಯಾಣಿಕರನ್ನು ಸಾಗಿಸಿ ಇತಿಹಾಸ ನಿರ್ಮಿಸಿದ ಭಾರತೀಯ ವಾಯುಯಾನ
ಕಳೆದ ಎರಡು ವಾರಗಳಲ್ಲಿ ಹೆಚ್ಚುತ್ತಲೇ ಇರುವ ವಿಮಾನ ಪ್ರಯಾಣಿಕರ ಸಂಖ್ಯೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತೀಯ ವಾಯುಯಾನ ಉದ್ಯಮವು 2024, ನ.17ರಂದು ಒಂದೇ ದಿನದಲ್ಲಿ ಮೊದಲ ಬಾರಿಗೆ ಐದು ಲಕ್ಷಕ್ಕೂ ಅಧಿಕ ದೇಶಿಯ ಪ್ರಯಾಣಿಕರನ್ನು ಸಾಗಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. ಎಲ್ಲ ವಿಮಾನಯಾನ ಸಂಸ್ಥೆಗಳು 3,173 ದೇಶಿಯ ಯಾನಗಳಲ್ಲಿ ಒಟ್ಟು 5,05,412 ಪ್ರಯಾಣಿಕರನ್ನು ಸಾಗಿಸಿವೆ.
ಕಳೆದ ಎರಡು ವಾರಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನ.8ರಂದು ಪ್ರಯಾಣಿಕರ ಸಂಖ್ಯೆ 4.9 ಲಕ್ಷ ಆಗಿದ್ದರೆ, ನ.9ರಂದು ಈ ಸಂಖ್ಯೆ 4.96 ಲಕ್ಷಕ್ಕೇರಿತ್ತು. ನ.14,15 ಮತ್ತು 16ರಂದು ಪ್ರಯಾಣಿಕರ ಸಂಖ್ಯೆ ಅನುಕ್ರಮವಾಗಿ 4.97 ಲಕ್ಷ , 4.99 ಲಕ್ಷ ಮತ್ತು 4.98 ಲಕ್ಷ ಆಗಿತ್ತು.
ದೀಪಾವಳಿ ಸಂದರ್ಭಕ್ಕೆ ಹೋಲಿಸಿದರೆ ಈಗ ಮದುವೆಯ ಸೀಸನ್ ಆರಂಭಗೊಳ್ಳುವುದರೊಂದಿಗೆ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಈ ತಿಂಗಳು ವಾಯುಯಾನ ಸಂಸ್ಥೆಗಳು ದಿನವೊಂದಕ್ಕೆ ಸರಾಸರಿ 3,161 ವಿಮಾನಯಾನಗಳನ್ನು ನಿರ್ವಹಿಸಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ದಿನವೊಂದಕ್ಕೆ ಸುಮಾರು ಎಂಟು ಹೆಚ್ಚುವರಿ ಯಾನಗಳನ್ನು ನಿರ್ವಹಿಸಲಾಗಿದೆ. ಆದರೆ ಇದು ದೀಪಾವಳಿಯ ದಟ್ಟಣೆಯ ದಿನಗಳಲ್ಲಿ ವಾಯುಯಾನ ಸಂಸ್ಥೆಗಳು ನಿರ್ವಹಿಸಿದ್ದ ಯಾನಗಳಿಗಿಂತ ಕಡಿಮೆಯಾಗಿದೆ.
ನ.12ರಂದು ಏರ್ಇಂಡಿಯಾದೊಂದಿಗೆ ವಿಸ್ತಾರದ ವಿಲೀನದೊಂದಿಗೆ ಸಂಯೋಜಿತ ಘಟಕವು ಮಹಾನಗರಗಳ ನಡುವಿನ ಕೆಲ ಯಾನಗಳನ್ನು ಡ್ರೀಮ್ಲೈನರ್ಗಳಿಗೆ ಮೇಲ್ದರ್ಜೆಗೇರಿಸಿದ್ದು,ಇದು ಪ್ರಯಾಣಿಕರ ಸಾಗಾಟ ಸಾಮರ್ಥ್ಯದ ಹೆಚ್ಚಳಕ್ಕೆ ಕಾರಣವಾಗಿದೆ.
ದೀಪಾವಳಿಯ ನಂತರ ದಿನಗಳಲ್ಲಿ ವಾಯುಯಾನ ಸಂಸ್ಥೆಗಳು ರಿಯಾಯಿತಿ ದರಗಳಲ್ಲಿ ಟಿಕೆಟ್ಗಳ ಮಾರಾಟವನ್ನು ಘೋಷಿಸಿದ್ದವು. ಇದು ಹೆಚ್ಚಿನ ಪ್ರಯಾಣಿಕರು ಟಿಕೆಟ್ಗಳನ್ನು ಬುಕ್ ಮಾಡಲು ಕಾರಣವಾಗಿತ್ತು. ನಂತರ ಟಿಕೆಟ್ ಬೆಲೆಗಳು ಮತ್ತೆ ಏರಿಕೆಯಾಗಿದ್ದು,ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದೆ. ಇದು ಬೇಡಿಕೆ ಹೆಚ್ಚುತ್ತಿರುವಾಗ ಪೂರೈಕೆ ಸ್ಥಿರವಾಗಿದ್ದರೆ ದರಗಳು ಏರುತ್ತವೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ.
ಇದು ವಾಯುಯಾನ ಸಂಸ್ಥೆಗಳಿಗೆ ಒಳ್ಳೆಯ ಸುದ್ದಿಯಾಗಿದೆ. ಎಲ್ಲ ವಾಯುಯಾನ ಸಂಸ್ಥೆಗಳು ನಷ್ಟದಲ್ಲಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದು ಉದ್ಯಮಕ್ಕೆ ಪೂರಕವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವಿಮಾನ ಪ್ರಯಾಣದಲ್ಲಿ ಹೆಚ್ಚಳವು ಗಮನಾರ್ಹವಾಗಿದೆ. ವಿಮಾನನಿಲ್ದಾಣಗಳ ಆಧುನೀಕರಣ ಮತ್ತು ವಿಮಾನ ಸಂಪರ್ಕಗಳನ್ನು ಹೆಚ್ಚಿಸಲು ಸರಕಾರವು ಹೆಚ್ಚಿನ ಗಮನವನ್ನು ಹರಿಸಿರುವುದು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಮುಂದಿನ ವರ್ಷ ದಿಲ್ಲಿ ಮತ್ತು ಮುಂಬೈ ಹೊಸ ವಿಮಾನ ನಿಲ್ದಾಣಗಳನ್ನು ಪಡೆಯಲಿದ್ದು ಇದು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸಲಿದೆ.