ಕಳೆದ 5 ವರ್ಷಗಳಲ್ಲಿ ರೂ. 10.6 ಲಕ್ಷ ಕೋಟಿ ಸಾಲ ರೈಟ್ ಆಫ್ ಮಾಡಿದ ಭಾರತೀಯ ಬ್ಯಾಂಕುಗಳು
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಕಳೆದ ಐದು ವರ್ಷ ಅವಧಿಯಲ್ಲಿ ದೇಶದ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಸುಮಾರು ರೂ 10.6 ಲಕ್ಷ ಕೋಟಿ ಸಾಲಗಳನ್ನು ರೈಟ್ ಆಫ್ ಮಾಡಿವೆ, ಈ ಮೊತ್ತದಲ್ಲಿ ಶೇ. 50 ದೊಡ್ಡ ಕೈಗಾರಿಕಾ ಸಂಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಭಾಗವತ್ ಕರಡ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ ರೂ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಾಲ ಹೊಂದಿದ ಸುಮಾರು 2300 ಸಾಲಗಾರರು ಉದ್ದೇಶಪೂರ್ವಕವಾಗಿ ರೂ 2 ಲಕ್ಷ ಕೋಟಿ ಸಾಲ ಮರುಪಾವತಿಸಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.
“ಈ ರೀತಿ ರೈಟ್ ಆಫ್ ಮಾಡುವುದರಿಂದ ಸಾಲಗಾರರ ಮರುಪಾವತಿ ಬಾಧ್ಯತೆಗಳನ್ನು ಕೈಬಿಡುವುದಿಲ್ಲ,” ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ರೀತಿ ರೈಟ್ ಆಫ್ ಮಾಡಿರುವ ಹೊರತಾಗಿಯೂ ಸಾಲಗಾರರಿಂದ ಸಾಲ ವಸೂಲಾತಿ ಪ್ರಕ್ರಿಯೆ ಮುಂದುವರಿಯುತ್ತದೆ, ಈ ರೈಟ್ ಆಫ್ ಪ್ರಕ್ರಿಯೆಯಿಂದ ಸಾಲಗಾರರಿಗೆ ಪ್ರಯೋಜನವಿಲ್ಲ ಎಂದು ಕರಡ್ ಹೇಳಿದರು.
ಯಾರ ಸಾಲಗಳನ್ನು ರೈಟ್ ಆಫ್ ಮಾಡಲಾಗಿದೆ ಎಂಬ ಕುರಿತ ಮಾಹಿತಿಯನ್ನು ಆರ್ಬಿಐ ಕಾಯಿದೆಯನ್ನು ಮುಂದೊಡ್ಡಿ ಸಚಿವರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಸಾಲ ಮರುಪಾವತಿಯಲ್ಲಿ ವಿಳಂಬಕ್ಕಾಗಿ ದೇಶದ ಕಮರ್ಷಿಯಲ್ ಬ್ಯಾಂಕುಗಳು ಆರ್ಥಿಕ ವರ್ಷ 2022-23ರಲ್ಲಿ ಒಟ್ಟು ರೂ 5,309.80 ಕೋಟಿ ಮೊತ್ತವನ್ನು ದಂಡ ರೂಪದಲ್ಲಿ ಸಂಗ್ರಹಿಸಿವೆ ಎಂದು ಸಚಿವರು ಮಾಹಿತಿ ನೀಡಿದರು.