ಪೋರ್ಚುಗೀಸರಿಂದ ವಿಮೋಚನೆ ಬಳಿಕ ಗೋವಾ ಮೇಲೆ ಭಾರತೀಯ ಸಂವಿಧಾನದ ಹೇರಿಕೆ: ಕಾಂಗ್ರೆಸ್ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ
PC : X/@carlosgoa25
ಪಣಜಿ: 1961ರಲ್ಲಿ ಪೋರ್ಚುಗೀಸ್ ಆಡಳಿತದಿಂದ ಗೋವಾ ವಿಮೋಚನೆಗೊಂಡ ನಂತರ, ಅದರ ಮೇಲೆ ಭಾರತೀಯ ಸಂವಿಧಾನವನ್ನು ಹೇರಲಾಯಿತು ಎಂದು ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರಿಯಾಟೊ ಫರ್ನಾಂಡೀಸ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆಯು ಭಯಾನಕವಾಗಿದ್ದು, ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಆಯೋಜನೆಗೊಂಡಿದ್ದ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಫರ್ನಾಂಡೀಸ್, 1987ರಲ್ಲಿ ರಾಜ್ಯದ ಸ್ಥಾನಮಾನ ಪಡೆದಿದ್ದ ಗೋವಾ, ತನ್ನ ಹಣೆಬರಹವನ್ನು ತಾನೇ ನಿರ್ಧರಿಸಲಿದೆ ಎಂದು ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಹೇಳಿದ್ದರಾದರೂ, ಅದು ಸಾಧ್ಯನವಾಗಲೇ ಇಲ್ಲ” ಎಂದು ಹೇಳಿದರು.
ಪೋರ್ಚುಗೀಸ್ ಪಾಸ್ ಪೋರ್ಟ್ ಅನ್ನು ಆಯ್ಕೆ ಮಾಡಿಕೊಂಡಿರುವವರ ಪರವಾಗಿರುವ ಹಾಗೂ ಗೋವನ್ನರಿಗೆ ದ್ವಿರಾಷ್ಟ್ರ ನಾಗರಿಕತ್ವದ ಬೆಂಬಲಿಗರಾಗಿರುವ ಕಾಂಗ್ರೆಸ್ ಅಭ್ಯರ್ಥಿ ವಿರಿಯಾಟೊ ಫರ್ನಾಂಡೀಸ್ ದಕ್ಷಿಣ ಗೋವಾದಲ್ಲಿ ನಡೆದ ಚುನಾವಣೆ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ತಾವು ನಡೆಸಿದ್ದ ಮಾತುಕತೆಯನ್ನು ಉಲ್ಲೇಖಿಸಿದ ಫರ್ನಾಂಡೀಸ್, “1961ರಲ್ಲಿ ಗೋವಾ ವಿಮೋಚನೆಗೊಂಡಾಗ, ನಮ್ಮ ಮೇಲೆ ಭಾರತೀಯ ಸಂವಿಧಾನವನ್ನು ಬಲವಂತವಾಗಿ ಹೇರಲಾಯಿತು ಎಂದು ಅವರಿಗೆ ನಾನು ತಿಳಿಸಿದ್ದೆ” ಎಂದು ಹೇಳಿದ್ದಾರೆ.
ಆಗ ಫರ್ನಾಂಡೀಸ್ ಅವರು ಪೋರ್ಚುಗೀಸ್ ಪಾಸ್ ಪೋರ್ಟ್ ಅನ್ನು ಆಯ್ಕೆ ಮಾಡಿಕೊಂಡಿರುವವರಿಗೆ ದ್ವಿರಾಷ್ಟ್ರ ನಾಗರಿಕತ್ವಕ್ಕಾಗಿ ಆಗ್ರಹಿಸುತ್ತಿರುವ ‘ಗೋಯೆಂಚೊ ಅವೇ’ ಎಂಬ ಸರಕಾರೇತರ ಸಂಸ್ಥೆಯ ಭಾಗವಾಗಿದ್ದರು.
ವಿರಿಯಾಟೊ ಫರ್ನಾಂಡೀಸ್ ಹೇಳಿಕೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕಾಂಗ್ರೆಸ್ ಪಕ್ಷವು ಈ ಅಜಾಗರೂಕ ಭಾರತ ವಿಭಜಿಸುವ ರಾಜಕೀಯವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಕಾಂಗ್ರೆಸ್ ನಮ್ಮ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಮೇ 7ರಂದು ನಡೆಯಲಿರುವ ಮೂರನೆಯ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.