ರಹಸ್ಯ ಮಿಲಿಟರಿ ದಾಖಲೆ ಹಂಚಿಕೊಂಡ ಸತೇಂದ್ರ ಸಿವಾಲ್ ಹನಿಟ್ರ್ಯಾಪ್ ಗೊಳಗಾಗಿದ್ದ!
Photo: ndtv.com
ಮೀರತ್ : ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐಗಾಗಿ ಗೂಢಚರ್ಯೆ ನಡೆಸಿದ ಆರೋಪದಲ್ಲಿ ರಶ್ಯದ ಮಾಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬನನ್ನು ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಚಯವಾದ ಮಹಿಳೆಯಿಂದ ಹನಿಟ್ರ್ಯಾಪ್ ಗೊಳಗಾದ ಈತ ಆಕೆಯೊಂದಿಗೆ ರಹಸ್ಯ ಮಿಲಿಟರಿ ದಾಖಲೆಗಳನ್ನು ಹಂಚಿಕೊಂಡಿದ್ದನೆಂದು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ತಿಳಿಸಿದೆ.
ಮೂಲತಃ ಹಾಪುರ್ನ ಶಾಮಾಹಿಯುದ್ದೀನ್ಪುರ ಗ್ರಾಮದ ನಿವಾಸಿಯಾದ ಸತೇಂದ್ರ ಸಿವಾಲ್ ಬಂಧಿತ ಆರೋಪಿ. ಈತ ಯುದ್ಧ ವಿಮಾನಗಳು ಹಾಗೂ ಜಲಾಂತರ್ಗಾಮಿಗಳು ಸೇರಿದಂತೆ ಭಾರತೀಯ ವಾಯುಪಡೆ ಹಾಗೂ ಭಾರತೀಯ ನೌಕಾಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಆಕೆಯೊಂದಿಗೆ ಹಂಚಿಕೊಂಡಿದ್ದನೆಂದು ಎಟಿಎಸ್ ಇನ್ಸ್ಪೆಕ್ಟರ್ ರಾಜೀವ್ ತ್ಯಾಗಿ ಅವರು ಮೀರತ್ ನಲ್ಲಿ ತಿಳಿಸಿದ್ದಾರೆ. ಈತನನ್ನು ಫೆಬ್ರವರಿ ನಾಲ್ಕರಂದು ಲಕ್ನೋ ದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಸಿವಾಲ್ನನ್ನು ಫೆಬ್ರವರಿ 10ರವರೆಗೆ 15 ದಿನಗಳ ಕಾಲ ಎಟಿಎಸ್ ರಿಮಾಂಡ್ನಲ್ಲಿರಿಸಲಾಗಿದೆ.
‘‘ಪೂಜಾ ಮೆಹ್ರಾ ಎಂಬ ಹೆಸರಿನಲ್ಲಿ ಆನ್ಲೈನ್ ಪ್ರೊಫೈಲ್ ಹೊಂದಿರುವ ಮಹಿಳೆಯ ಜೊತೆಗೆ ಸಿವಾಲ್ ಕಳೆದ ವರ್ಷ ಸಾಮಾಜಿಕ ಜಾಲತಾಣವೊಂದರಲ್ಲಿ ಸಂಪರ್ಕಕ್ಕೆ ಬಂದಿದ್ದ. ಯುವತಿಯು ಆತನನ್ನು ಹನಿಟ್ರ್ಯಾಪ್ ಮಾಡಿ, ಹಣದ ಆಮಿಷವೊಡ್ಡಿ ಆಕೆಗೆ ರಹಸ್ಯ ಸೇನಾ ದಾಖಲೆಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದಳು” ಎಂದು ತ್ಯಾಗಿ ತಿಳಿಸಿದ್ದಾರೆ.
ಮಹಿಳೆಯೊಂದಿಗೆ ತಾನು ಹಂಚಿಕೊಂಡ ದಾಖಲೆಗಳು ಈಗಲೂ ತನ್ನ ಮೊಬೈಲ್ ಫೋನ್ ನಲ್ಲಿ ಶೇಖರಿಸಲ್ಪಟ್ಟಿದೆ ಎಂದು ಸಿವಾಲ್ ವಿಚಾರಣೆಯ ವೇಳೆ ಹೇಳಿದ್ದಾನೆ. ಆತನ ಫೋನ್ ಮತ್ತಿತರ ಇಲೆಕ್ಟ್ರಾನಿಕ್ ಉಪಕರಣಗಳ ವಿಧಿವಿಜ್ಞಾನ (ಫಾರೆನ್ಸಿಕ್) ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಎಟಿಎಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಐಎಸ್ಐನ ಹ್ಯಾಂಡ್ಲರ್ ಗಳ ಜಾಲದೊಂದಿಗೆ ಸಿವಾಲ್ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದನ್ನು ಇಲೆಕ್ಟ್ರಾನಿಕ್ ಹಾಗೂ ಭೌತಿಕ ಕಣ್ಗಾವಲಿನ ಮೂಲಕ ಎಟಿಎಸ್ ಪತ್ತೆ ಹಚ್ಚಿದೆ ಎಂದು ಅವರು ಹೇಳಿದ್ದಾರೆ
ಮಹಿಳೆಯ ಸಾಮಾಜಿಕ ಜಾಲತಾಣ ಖಾತೆಯನ್ನು ಐಎಸ್ಐ ನಿರ್ವಹಿಸುತ್ತಿತ್ತೆಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ಸಿವಾಲ್ ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಐಬಿಎಸ್ಎ (ಭಾರತದಲ್ಲಿ ನೆಲೆಸಿರುವ ಭದ್ರತಾ ಸಹಾಯಕ) ಅಧಿಕಾರಿಯಾಗಿ 2021, ಫೆ.4ರಿಂದೀಚೆಗೆ ಲಕ್ನೋದಿಂದ ಕೆಲಸ ಮಾಡುತ್ತಿದ್ದನು.
ಸಿವಾಲ್ವಿರುದ್ಧ ಲಕ್ನೋದ ಎಟಿಎಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 121ಎ (ದೇಶದ ವಿರುದ್ಧ ಸಮರ ಸಾರುವುದು) ಹಾಗೂ1923ರ ಅಧಿಕೃತ ಗೌಪ್ಯತೆಗಳ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ವಿಚಾರಣೆಯ ವೇಳೆ ಸಿವಾಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಸಿವಾಲ್ ನ ಕುಟುಂಬ ಸದಸ್ಯರು ಹಾಪುರ್ನಲ್ಲಿರುವ ತಮ್ಮ ಸ್ವಗ್ರಾಮವನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.