ಮುಂದಿನ ವರ್ಷ ಸೈಬರ್ ಭದ್ರತೆ ವೆಚ್ಚ ಹೆಚ್ಚಳವಾಗಬಹುದು : ವರದಿ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಮುಂದಿನ ವರ್ಷ ಸೈಬರ್ ಭದ್ರತೆ ಬಜೆಟ್ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಸುಮಾರು ಶೇ. 93ರಷ್ಟು ಭಾರತೀಯ ಕಾರ್ಯನಿರ್ವಹಣಾಧಿಕಾರಿಗಳು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಶೇ. 17ರಷ್ಟು ಮಂದಿ ತಮ್ಮ ಸೈಬರ್ ಭದ್ರತೆ ಬಜೆಟ್ ಅನ್ನು ಶೇ. 15ರಷ್ಟು ಏರಿಕೆ ಮಾಡಲು ಯೋಜಿಸುತ್ತಿದ್ದಾರೆ ಎಂದು PwC India Digital Trust Insights 2025 ವರದಿಯಲ್ಲಿ ಹೇಳಲಾಗಿದೆ.
ಇದಲ್ಲದೆ, ಇತ್ತೀಚಿನ ಸೈಬರ್ ಭದ್ರತೆ ಉಲ್ಲಂಘನೆ ಪ್ರಕರಣಗಳ ಹಿನ್ನೆಲೆಯಲ್ಲಿ, ಮುಂದಿನ ವರ್ಷ ತಮ್ಮ ದತ್ತಾಂಶ ರಕ್ಷಣೆ ಹಾಗೂ ಪರಿಹಾರವನ್ನು ಭಾರತೀಯ ಉದ್ಯಮದ ನಾಯಕರು ತಮ್ಮ ಮುಖ್ಯ ಸೈಬರ್ ಹೂಡಿಕೆಯ ಆದ್ಯತೆಯಾಗಿಸಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.
PwC’s 2025 Digital Trust Insights – India Highlights ಸಮೀಕ್ಷೆಯ ಪ್ರಕಾರ, ಶೇ. 61ರಷ್ಟು ಭಾರತೀಯ ಕಾರ್ಯನಿರ್ವಹಣಾಧಿಕಾರಿಗಳು ಮುಂದಿನ 12 ತಿಂಗಳಲ್ಲಿ ಸೈಬರ್ ಭದ್ರತೆಯನ್ನು ತಮ್ಮ ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿದ್ದರೆ, ಶೇ. 60 ಮಂದಿ ಡಿಜಿಟಲ್ ಮತ್ತು ತಾಂತ್ರಿಕ ಅಪಾಯಗಳನ್ನು ನಂತರದ ಆದ್ಯತೆಯಾಗಿಸಿಕೊಂಡಿದ್ದಾರೆ. ಇದರ ನಂತರ ಹಣದುಬ್ಬರ (ಶೇ. 48 ಮಂದಿ), ಪರಿಸರ ಸಮಸ್ಯೆಗಳು (ಶೇ. 30 ಮಂದಿ) ಅವರ ಆದ್ಯತೆಗಳಾಗಿವೆ.
ಸಮೀಕ್ಷೆಗೊಳಪಟ್ಟಿರುವ ಶೇ. 93ರಷ್ಟು ಭಾರತೀಯ ಕಾರ್ಯನಿರ್ವಹಣಾಧಿಕಾರಿಗಳು ಮುಂದಿನ ವರ್ಷ ತಮ್ಮ ಸೈಬರ್ ಭದ್ರತೆ ಬಜೆಟ್ ಹೆಚ್ಚಳವಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಈ ವರದಿಯು ವಿವಿಧ ಪ್ರಾಂತ್ಯಗಳ ಭಾರತೀಯ ಉದ್ಯಮಗಳನ್ನು ಪ್ರತಿನಿಧಿಸುವ 155 ಕಾರ್ಯನಿರ್ವಹಣಾಧಿಕಾರಿಗಳನ್ನು ಒಳಗೊಂಡಂತೆ 4,042 ವ್ಯಾಪಾರ, ತಂತ್ರಜ್ಞಾನ ಮತ್ತು ಭದ್ರತಾ ಕಾರ್ಯನಿರ್ವಹಣಾಧಿಕಾರಿಗಳ ಒಳನೋಟಗಳನ್ನು ಒಳಗೊಂಡಿದೆ.
ಕ್ಲೌಡ್ ಸಂಬಂಧಿ ಬೆದರಿಕೆಗಳನ್ನು ತಮ್ಮ ಪ್ರಮುಖ ಕಳವಳ ಎಂದು ಉಲ್ಲೇಖಿಸಿರುವ ಶೇ. 55ರಷ್ಟು ಭಾರತೀಯ ಕಾರ್ಯನಿರ್ವಹಣಾಧಿಕಾರಿಗಳು, ಅದನ್ನು ತೀವ್ರ ಕಳವಳಕಾರಿ ಸೈಬರ್ ಅಪಾಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮುಂದಿನ ವರ್ಷ ಈ ಬೆದರಿಕೆಯನ್ನು ಎದುರಿಸಲು ತೀರಾ ಕನಿಷ್ಠ ಪ್ರಮಾಣದಲ್ಲಿ ಸನ್ನದ್ಧರಾಗಿರುವುದಾಗಿ ಶೇ. 50ರಷ್ಟು ಭದ್ರತಾ ನಾಯಕರು ಹಾಗೂ ಮುಖ್ಯ ಹಣಕಾಸು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದನ್ನೂ ವರದಿ ಬಹಿರಂಗಗೊಳಿಸಿದೆ.
ನಿಯಮಗಳು ನಮ್ಮ ಸೈಬರ್ ಭದ್ರತಾ ಹೂಡಿಕೆಯನ್ನು ಶೇ. 74ರಷ್ಟು ಹೆಚ್ಚಳ ಮಾಡಿವೆ ಅಥವಾ ತಮ್ಮ ಸೈಬರ್ ಭದ್ರತೆ ನಿಲುವನ್ನು ಬಲಿಷ್ಠಗೊಳಿಸುವಂತೆ ಮಾಡಿವೆ ಎಂದು ಎಲ್ಲ ಭದ್ರತಾ ನಾಯಕರು ಹಾಗೂ ಮುಖ್ಯ ಹಣಕಾಸು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಇವೆಲ್ಲದರಿಂದ, ಭಾರತೀಯ ಉದ್ಯಮಗಳಿಗೆ ಸದೃಢ ಸೈಬರ್ ಭವಿಷ್ಯವನ್ನು ರೂಪಿಸುವಲ್ಲಿ ವ್ಯೂಹಾತ್ಮಕ ಹೂಡಿಕೆ ಹಾಗೂ ನಿಯಮಾವಳಿಗಳ ಪಾಲನೆ ಪ್ರಮುಖ ಪಾತ್ರ ವಹಿಸುತ್ತಿವೆ.