ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ಟಾರ್ಗೆಟೆಡ್ ಹತ್ಯೆಗಳನ್ನು ನಡೆಸಿದೆ: The Guardian ಸ್ಫೋಟಕ ವರದಿ
ಆರೋಪ ನಿರಾಕರಿಸಿದ ಭಾರತ ಸರ್ಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಿದೇಶಿ ನೆಲದಲ್ಲಿ ವಾಸಿಸುವ ಉಗ್ರರ ನಿರ್ಮೂಲನೆಯ ತನ್ನ ಹೊಸ ತಂತ್ರಗಾರಿಕೆಯ ಭಾಗವಾಗಿ ಪಾಕಿಸ್ತಾನದಲ್ಲಿ ಕೆಲ ವ್ಯಕ್ತಿಗಳನ್ನು ಭಾರತ ಸರ್ಕಾರ ಹತ್ಯೆಗೈದಿದೆ ಎಂದು ಅಜ್ಞಾತ ಭಾರತೀಯ ಮತ್ತು ಪಾಕಿಸ್ತಾನಿ ಗುಪ್ತಚರ ಮೂಲಗಳನ್ನಾಧರಿಸಿ The Guardian ವರದಿ ಮಾಡಿದೆ.
ಈ ವರದಿಯ ಪ್ರಕಾರ 2020ರಿಂದೀಚೆಗೆ ಭಾರತ ಸರ್ಕಾರ ಕನಿಷ್ಠ 20 ಮಂದಿಯನ್ನು ಪಾಕಿಸ್ತಾನದಲ್ಲಿ ಹತ್ಯೆಗೈದಿದೆ. ಈ ಹತ್ಯೆಗಳನ್ನು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳ ಮೂಲಕ ಭಾರತದ ವಿದೇಶಿ ಗುಪ್ತಚರ ಏಜನ್ಸಿ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಇದರ ನೇರ ಶಾಮೀಲಾತಿಯೊಂದಿಗೆ ನಡೆದಿದೆ ಎಂದು ವರದಿ ಹೇಳಿದೆ.
2019ರಲ್ಲಿ ನಡೆದ ಪುಲ್ವಾಮ ದಾಳಿಯ ನಂತರ ಭಾರತದ ವಿದೇಶಿ ಗುಪ್ತಚರ ಏಜನ್ಸಿ ತನ್ನ ತಂತ್ರಗಾರಿಕೆ ಬದಲಾಯಿಸಿದೆ ಎಂದು ಅಜ್ಞಾತ ಭಾರತೀಯ ಅಧಿಕಾರಿಗಳು ನೀಡಿದ್ದಾರೆನ್ನಲಾದ ಮಾಹಿತಿಯನ್ನಾಧರಿಸಿ ʼದಿ ಗಾರ್ಡಿಯನ್ʼ ವರದಿ ಮಾಡಿದೆ.
ಯುಎಇ ಹೊರಗೆ ಕಾರ್ಯಾಚರಿಸುವ ಸ್ಲೀಪರ್ ಸೆಲ್ಗಳನ್ನು ಭಾರತದ ವಿದೇಶಿ ಗುಪ್ತಚರ ಏಜನ್ಸಿ ತನ್ನ ಹೊಸ ಉಗ್ರ ನಿಗ್ರಹ ತಂತ್ರಗಾರಿಕೆ ಭಾಗವಾಗಿ ರಚಿಸಿತ್ತು ಎಂದು ವರದಿ ಹೇಳಿದೆ.
ಸ್ಥಳೀಯ ಕ್ರಿಮಿನಲ್ಗಳು ಅಥವಾ ಬಡ ಪಾಕಿಸ್ತಾನೀಯರಿಗೆ ಹತ್ಯೆಗಳನ್ನು ನಡೆಸಲು ಕೋಟ್ಯಂತರ ರೂಪಾಯಿಗಳನ್ನು ಈ ಸೆಲ್ಗಳು ನೀಡಿವೆ ಎಂದು ಪಾಕ್ ಅಧಿಕಾರಿಗಳು ಆರೋಪಿಸಿದ್ದಾರೆಂದು ವರದಿ ಹೇಳಿದೆ.
ಇಸ್ಲಾಮಿಕ್ ಸ್ಟೇಟ್ ಹಾಗು ತಾಲಿಬಾನ್ ಗೆ ಸಂಬಂಧಿಸಿದ ಘಟಕಗಳ ಜಾಲಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯ ಏಜಂಟರು ನುಸುಳಿದ್ದಾರೆ. ಅಲ್ಲಿ ಅವರು ಪಾಕಿಸ್ತಾನಿ ತೀವ್ರಗಾಮಿಗಳನ್ನು ನೇಮಿಸಿ ಅವರಿಗೆ "ನೀವು ಧರ್ಮನಿಂದಕರನ್ನು ಕೊಲ್ಲುತ್ತಿದ್ದೀರಿ" ಎಂದು ನಂಬಿಸಿ ಅವರಿಂದ ಭಾರತೀಯ ಭಿನ್ನಮತೀಯರನ್ನು ಹತ್ಯೆ ಮಾಡಿಸುತ್ತಿದ್ದರೆಂದು ವರದಿ ಹೇಳಿದೆ.
ಪಾಕಿಸ್ತಾನದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಪರಂಜಿತ್ ಸಿಂಗ್ ಪಂಜ್ವರ್ ಹತ್ಯೆ ಇದೇ ರೀತಿ ನಡೆದಿತ್ತು. ಪಂಜ್ವರ್ನನ್ನು ಲಾಹೋರ್ನಲ್ಲಿ ಮೇ ತಿಂಗಳಲ್ಲಿ ಹತ್ಯೆಗೈಯ್ಯಲಾಗಿತ್ತು ಎಂದು ವರದಿ ಹೇಳಿದೆ.
ದಿ ಗಾರ್ಡಿಯನ್ ವರದಿಯಲ್ಲಿದ್ದಂತಹುದೇ ಆರೋಪಗಳನ್ನು ಅಮೆರಿಕ ಮತ್ತು ಕೆನಡಾ ಭಾರತದ ವಿರುದ್ಧ ಮಾಡುವುದಕ್ಕೆ ಮುಂಚೆಯೇ ಈ ಹತ್ಯೆ ನಡೆದಿತ್ತು.
ಅಮೆರಿಕ ನಾಗರಿಕ ಹಾಗೂ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ನನ್ನು ಹತ್ಯೆಗೈಯ್ಯಲು ಸಂಚನ್ನು ತಾನು ವಿಫಲಗೊಳಿಸಿದ್ದಾಗಿ ಅಮೆರಿಕಾ ನಂತರ ಹೇಳಿತ್ತು.
ಕೆನಡಾದಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜಂಟರ ಕೈವಾಡವಿದೆ ಎಂಬ ಆರೋಪಗಳ ಬಗ್ಗೆ ತಮ್ಮ ಸರ್ಕಾರದ ಗುಪ್ತಚರ ಏಜನ್ಸಿಗಳು ಪರಿಶೀಲಿಸುತ್ತಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ ಕಳೆದ ಸೆಪ್ಟೆಂಬರ್ನಲ್ಲಿ ಹೇಳಿದ್ದರು.
"ಸುಳ್ಳು, ದುರುದ್ದೇಶಿತ" ಎಂದ ಭಾರತ ಸರ್ಕಾರ
ಭಾರತದ ವಿದೇಶಾಂಗ ಸಚಿವಾಲಯವು ʼದಿ ಗಾರ್ಡಿಯನ್ʼ ವರದಿಯಲ್ಲಿನ ಅಂಶಗಳನ್ನು ನಿರಾಕರಿಸಿದೆ ಹಾಗೂ ಇದನ್ನು ಸುಳ್ಳು ಹಾಗೂ ದುರುದ್ದೇಶಿತ ಭಾರತ-ವಿರೋಧಿ ಪ್ರಚಾರವಾಗಿದೆ ಎಂದು ಹೇಳಿದೆ.
“ಇತರ ದೇಶಗಳಲ್ಲಿ ಲಕ್ಷ್ಯದ ಹತ್ಯೆಗಳು ಭಾರತ ಸರ್ಕಾರದ ನೀತಿಯಲ್ಲ” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ಹೇಳಿರುವುದನ್ನೂ ಸಚಿವಾಲಯದ ಹೇಳಿಕೆ ಉಲ್ಲೇಖಿಸಿದೆ.