100 ಬಿಲಿಯನ್ ಡಾಲರ್ ಮೈಲುಗಲ್ಲು ದಾಟಿದ ಭಾರತೀಯ ವಲಸಿಗರ ಸ್ವೀಕೃತಿ

ಸಾಂದರ್ಭಿಕ ಚಿತ್ರ Photo: PTI
ಮುಂಬೈ: ವಿಶ್ವದ ವಿವಿಧ ದೇಶಗಳಿಗೆ ಭಾರತದಿಂದ 18 ದಶಲಕ್ಷ ಮಂದಿ ವಲಸೆ ಹೋಗಿದ್ದು, ಭಾರತ ಇಡೀ ವಿಶ್ವದಲ್ಲೇ ಗರಿಷ್ಠ ಅಂತಾರಾಷ್ಟ್ರೀಯ ವಲಸೆಗಾರರ ಮೂಲ ಎನಿಸಿಕೊಂಡಿದೆ. ಭಾರತದಿಂದ ವಲಸೆ ಹೋದವರಲ್ಲಿ ಪ್ರಮುಖವಾಗಿ ಯುಎಇ, ಅಮೆರಿಕ ಮತ್ತು ಸೌದಿ ಅರೇಬಿಯಾದಲ್ಲಿದ್ದಾರೆ. ದೇಶಕ್ಕೆ ಗರಿಷ್ಠ ಪಾವತಿಗಳನ್ನು ನೀಡುವಲ್ಲಿ ವಲಸೆ ಹೋದ ಭಾರತೀಯರು ಪ್ರಮುಖ ಪಾಲು ನೀಡುತ್ತಿದ್ದು, 2022ರಲ್ಲಿ ಈ ಮೊತ್ತ 110 ಬಿಲಿಯನ್ ಡಾಲರ್ ದಾಟಿದೆ.
ವಿಶ್ವಸಂಸ್ಥೆಯ ಜಾಗತಿಕ ವಲಸೆ ಸಂಸ್ಥೆ ಬುಧವಾರ ಢಾಕಾದಲ್ಲಿ ಬಿಡುಗಡೆಗೊಳಿಸಿದ 2024ರ ವಿಶ್ವ ವಲಸೆ ವರದಿಯಲ್ಲಿ, ಭಾರತ, ಮೆಕ್ಸಿಕೊ ಹಾಗೂ ಚೀನಾ ಗರಿಷ್ಠ ಪಾವತಿಗಳನ್ನು ಸ್ವೀಕರಿಸಿದ ದೇಶಗಳು ಎಂದು ಹೆಸರಿಸಲಾಗಿದೆ. ಉಳಿದಂತೆ ಫಿಲಿಫೀನ್ಸ್, ಫ್ರಾನ್ಸ್ ಮತ್ತು ಪಾಕಿಸ್ತಾನ ನಂತರದ ಸ್ಥಾನಗಳಲ್ಲಿವೆ.
111 ಬಿಲಿಯನ್ ಡಾಲರ್ ಸ್ವೀಕೃತಿಗಳನ್ನು ಪಡೆದಿರುವ ಭಾರತ, 100 ಬಿಲಿಯನ್ ಡಾಲರ್ ಮೈಲುಗಲ್ಲನ್ನು ದಾಟಿದ ಮೊದಲ ದೇಶ ಎನಿಸಿಕೊಂಡಿದೆ. 2020ರಲ್ಲಿ ಈ ಮೊತ್ತ 83 ಬಿಲಿಯನ್ ಡಾಲರ್ ಆಗಿತ್ತು. ಮೆಕ್ಸಿಕೊ ತನ್ನ ವಲಸೆಗಾರರಿಂದ 61 ಬಿಲಿಯನ್ ಡಾಲರ್ ಸ್ವೀಕೃತಿಯನ್ನು ಪಡೆದಿದ್ದು, ಎರಡನೇ ಅತಿಹೆಚ್ಚು ಪಡೆದ ದೇಶ ಎನಿಸಿಕೊಂಡಿದೆ. ಕಳೆದ ವರ್ಷ ಚೀನಾ ಇದ್ದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.
2022ರಲ್ಲಿ ಚೀನಾದ ಸ್ವೀಕೃತಿ 51 ಬಿಲಿಯನ್ ಡಾಲರ್ ಆಗಿದ್ದು, ಈ ಇಳಿಕೆಯಿಂದಾಗಿ ಚೀನಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಚೀನಾದ ಕುಸಿತಕ್ಕೆ ಉದ್ಯೋಗ ನಿರ್ವಹಿಸುವ ವಯೋಮಿತಿಯ ಜನಸಂಖ್ಯೆಯಲ್ಲಿ ಇಳಿಕೆ ಮತ್ತು ಶೂನ್ಯ ಕೋವಿಡ್ ನೀತಿ ಇದಕ್ಕೆ ಪ್ರಮುಖ ಕಾರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕ್ರಮವಾಗಿ 30 ಬಿಲಿಯನ್ ಮತ್ತು 21 ಬಿಲಿಯನ್ ಡಾಲರ್ ಸ್ವೀಕೃತಿಯೊಂದಿಗೆ 6 ಮತ್ತು 8ನೇ ಸ್ಥಾನದಲ್ಲಿವೆ.