ಸೋಮಾಲಿಯ ಕಡಲ್ಗಳ್ಳರಿಂದ 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ
Photo: PTI
ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಸೋಮಾಲಿಯಾ ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾ ಪಡೆ 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದೆ ಹಾಗೂ ಇರಾನ್ ಮೂಲದ ಸರಕು ಸಾಗಾಣಿಗೆ ಹಡಗಳನ್ನು ಬಂಧಮುಕ್ತಗೊಳಿಸಿದೆ.
ಮಾರ್ಚ್ 28ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ಹಡಗು ‘ಅಲ್ ಕಂಬಾರ್’ಗೆ ಕಡಲ್ಗಳ್ಳರು ಹತ್ತಿರುವ ಕುರಿತು ಮಾಹಿತಿ ದೊರೆಯಿತು. ಈ ಹಿನ್ನೆಲೆಯಲ್ಲಿ ಕಡಲ ಸುರಕ್ಷತಾ ಕಾರ್ಯಾಚರಣೆಗಾಗಿ ಅರೆಬಿ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ನೌಕಾ ಪಡೆಯ ಎರಡು ಯುದ್ಧ ನೌಕೆಗಳಾದ ಐಎನ್ಎಸ್ ‘ಸುಮೇಧಾ’ ಹಾಗೂ ಎಎನ್ಎಸ್ ‘ತ್ರಿಶೂಲ್’ ಶುಕ್ರವಾರ ಬೆಳಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು ಎಂದು ನೌಕಾ ಪಡೆ ವಕ್ತಾರರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘‘ಈ ಎರಡು ಯುದ್ಧ ನೌಕೆಗಳು 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿತು ಹಾಗೂ ಕಡಲ್ಗಳ್ಳರು ಶರಣಾಗತರಾಗುವಂತೆ ಮಾಡಿತು. ಬಳಿಕ 23 ಪಾಕಿಸ್ತಾನ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿತು’’ ಎಂದು ಹೇಳಿಕೆ ತಿಳಿಸಿದೆ.
ಅನಂತರ ವಿಶೇಷ ತಂಡಗಳು ಹಡಗನ್ನು ಸಂಪೂರ್ಣ ಶುಚಿಗೊಳಿಸಿದವು. ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳ ಪುನಾರಂಭಕ್ಕೆ ಅನುಮತಿ ನೀಡಿದವು ಎಂದು ಹೇಳಿಕೆ ತಿಳಿಸಿದೆ.
ಇತ್ತೀಚೆಗಷ್ಟೆ ಸೋಮಾಲಿಯಾ ಕರಾವಳಿ ಬಳಿ ಕೈಗೊಂಡ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾದ 35 ಕಡಲ್ಗಳ್ಳರನ್ನು ಕರೆ ತಂದ ಭಾರತೀಯ ಯುದ್ಧ ನೌಕೆ ‘ಐಎನ್ಎಸ್ ಕೋಲ್ಕತ್ತ’ ಮುಂಬೈ ತಲುಪಿದೆ. ಅಲ್ಲದೆ, ಕಡಲ್ಗಳ್ಳರನ್ನು ಮುಂಬೈ ಪೊಲೀಸರ ವಶಕ್ಕೆ ನೀಡಿದೆ ಎಂದು ನೌಕಾಪಡೆ ತಿಳಿಸಿತು.