ಅಪಹೃತ ಮಾಲ್ಟಾ ಸರಕು ಹಡಗಿನ ರಕ್ಷಣೆಗೆ ಧಾವಿಸಿದ ಭಾರತೀಯ ನೌಕಾಪಡೆ
Photo: ANI
ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾಗಿದೆ ಎನ್ನಲಾದ ಮಾಲ್ಟಾ ದೇಶದ ಸರಕು ಹಡಗಿನ ರಕ್ಷಣೆಗೆ ಭಾರತೀಯ ನೌಕಾಪಡೆ ಧಾವಿಸಿದೆ. ಸೊಮಾಲಿಯ ಕರಾವಳಿಯತ್ತ ಸಾಗುತ್ತಿದೆ ಎನ್ನಲಾದ ಹಡಗಿನ ಮೇಲೆ ಅದು ನಿಗಾ ಇಟ್ಟಿದೆ.
ಅರಬ್ಬಿ ಸಮುದ್ರದಲ್ಲಿರುವ ಮಾಲ್ಟಾದ ಸರಕು ಹಡಗು ಎಮ್ವಿ ರುಯೆನ್ ಕಳುಹಿಸಿದ ತುರ್ತು ಅಪಾಯ ಸಂದೇಶಕ್ಕೆ ಭಾರತೀಯ ನೌಕಾಪಡೆ ತಕ್ಷಣ ಸ್ಪಂದಿಸಿದೆ. ಅದು ಭಾರತೀಯ ನೌಕಾಪಡೆಯ ಸಾಗರ ತೀರ ಗಸ್ತು ವಿಮಾನ ಮತ್ತು ಕಡಲ್ಗಳ್ಳತನ ನಿಗ್ರಹ ಉದ್ದೇಶದ ಗಸ್ತು ನೌಕೆಯೊಂದನ್ನು ಈ ಕಾರ್ಯಕ್ಕಾಗಿ ನಿಯೋಜಿಸಿದೆ.
‘‘ಅಪರಹಣಕ್ಕೊಳಗಾಗಿರುವ ಹಡಗಿನಲ್ಲಿ 18 ಸಿಬ್ಬಂದಿ ಇದ್ದಾರೆ. ಆ ಹಡಗು ಅಪಾಯದ ಸಂದೇಶವನ್ನು ಡಿಸೆಂಬರ್ 14ರಂದು ಕಳಹಿಸಿದೆ. ಆರು ಮಂದಿ ಆಗಂತುಕರು ಹಡಗನ್ನು ಏರಿದ್ದಾರೆ ಎಂದು ಆ ಸಂದೇಶ ತಿಳಿಸಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಭಾರತೀಯ ನೌಕಾಪಡೆಯು ತನ್ನ ಸಾಗರತೀರ ಗಸ್ತು ವಿಮಾನ ಮತ್ತು ಏಡನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿರುವ ಕಡಲ್ಗಳ್ಳತನ ನಿಗ್ರಹ ಹಡಗನ್ನು ಅಪಹರಣಕ್ಕೊಳಗಾಗಿದೆ ಎನ್ನಲಾದ ಹಡಗಿನತ್ತ ಕಳುಹಿಸಿದೆ’’ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಪಹೃತ ಹಡಗನ್ನು ಭಾರತೀಯ ಯುದ್ಧನೌಕೆಯು ತಡೆಗಟ್ಟಿದೆ ಮತ್ತು ಅದರ ಚಲನವಲನವನ್ನು ನಿಕಟವಾಗಿ ಗಮನಿಸುತ್ತಿದೆ ಎಂದು ಅದು ಹೇಳಿದೆ.
‘‘ಈ ವಲಯದ ಮೊದಲ ಸ್ಪಂದನಕಾರ ಎಂಬ ತನ್ನ ಹೆಗ್ಗಳಿಕೆಗೆ ಭಾರತೀಯ ನೌಕಾಪಡೆ ಬದ್ಧವಾಗಿದೆ. ಅಂತರರಾಷ್ಟ್ರೀಯ ಭಾಗೀದಾರರು ಮತ್ತು ಸ್ನೇಹಪರ ದೇಶಗಳೊಂದಿಗೆ ಸೇರಿಕೊಂಡು ಅದು ವಾಣಿಜ್ಯ ಸರಕು ಹಡಗುಗಳ ಸುರಕ್ಷತೆಯನ್ನು ನೋಡಿಕೊಳ್ಳುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.
ಗುರುವಾರ ಎಮ್ವಿ ರುಯೇನ್ ಹಡಗಿನ ಮೇಲೆ ದಾಳಿ ನಡೆದಾಗ ಅದು ಸೊಮಾಲಿಯದತ್ತ ತೆರಳುತ್ತಿತ್ತು. ಹಡಗಿನ ಮೇಲಿನ ನಿಯಂತ್ರಣವನ್ನು ಅದರ ಸಿಬ್ಬಂದಿ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್ನ ಮರೀನ್ ಟ್ರೇಡ್ ಆಪರೇಶನ್ಸ್ ತಿಳಿಸಿದೆ.
ಈ ಹಡಗಿನ ಮೇಲೆ ನಡೆದ ದಾಳಿಯು 2017ರ ಬಳಿಕ ಸೊಮಾಲಿ ಕಡಲ್ಗಳ್ಳರು ನಡೆಸಿರುವ ಮೊದಲ ದೊಡ್ಡ ದಾಳಿಯಾಗಿದೆ ಎನ್ನಲಾಗಿದೆ. ಹಲವು ದೇಶಗಳು ನಡೆಸಿದ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಯ ಬಳಿಕ ಏಡನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನ ಚಟುವಟಿಕೆಗಳು ಕೊನೆಗೊಂಡಿದ್ದವು.