ಭಾರತದ ಸಮಾಜದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: “ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಕುರಿತಂತೆ ತಾರತಮ್ಯದ ಯಾವುದೇ ಭಾವನೆ ಭಾರತದಲ್ಲಿಲ್ಲ ಎಂದು ಬ್ರಿಟಿಷ್ ಪತ್ರಿಕೆ Financial Timesಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದಲ್ಲಿ ಮುಸ್ಲಿಮರ ಭವಿಷ್ಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ ಎಂಬುದನ್ನು ನೆನಪಿಸಿದರಲ್ಲದೆ ತಾವು 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಮುಸ್ಲಿಂ-ವಿರೋಧಿ ಭಾವನೆಗಳು ಮತ್ತು ದ್ವೇಷದ ಭಾಷಣಗಳು ಹೆಚ್ಚಾಗಿವೆ ಎಂದು ದೇಶದಲ್ಲಿ ಮತ್ತು ವಿದೇಶದಲ್ಲಿ ಕೇಳಿಬರುತ್ತಿರುವ ಟೀಕೆಗಳನ್ನು ಅಲ್ಲಗಳೆದಿದ್ದಾರೆ.
ದೇಶದಲ್ಲಿ ಪಾರ್ಸಿ ಸಮುದಾಯದ ಯಶಸ್ಸನ್ನೂ ಉಲ್ಲೇಖಿಸಿದ ಪ್ರಧಾನಿ, “ಜಗತ್ತಿನ ಇತರೆಡೆ ದಬ್ಬಾಳಿಕೆಗೊಳಗಾದ ಅವರು ಭಾರತದಲ್ಲಿ ಸುರಕ್ಷಿತ ತಾಣ ಕಂಡುಕೊಂಡಿದ್ದಾರೆ ಹಾಗೂ ಇಲ್ಲಿ ಸಂತೋಷ, ಸಮೃದ್ಧಿಯಿಂದ ನೆಲೆಸಿದ್ದಾರೆ" ಎಂದು ಹೇಳಿದರು. ಆದರೆ ತಮ್ಮ ಮಾತುಗಳಲ್ಲಿ ಮೋದಿ ತಮ್ಮ ದೇಶದ 20 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ನೇರವಾಗಿ ಉಲ್ಲೇಖಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಸರಕಾರದ ಟೀಕಾಕಾರರ ವಿರುದ್ಧ ಕ್ರಮಗಳ ಕುರಿತಾದ ಪ್ರಶ್ನೆಗೆ ಮೋದಿ ಜೋರಾಗಿ ನಕ್ಕು ಉತ್ತರಿಸಿದರು ಎಂದು ಫೈನಾನ್ಶಿಯಲ್ ಟೈಮ್ಸ್ ಹೇಳಿದೆ.
“ಸಂಪಾದಕೀಯಗಳಲ್ಲಿ, ಟಿವಿ ಚಾನಲ್ಗಳಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ದೇಶದಲ್ಲಿ ಲಭ್ಯ ಸ್ವಾತಂತ್ರ್ಯವನ್ನು ಬಳಸಿ ನಮ್ಮ ಮೇಲೆ ಈ ಆರೋಪಗಳನ್ನು ಮಾಡುವ ವ್ಯವಸ್ಥೆಯೇ ಇದೆ. ಅವರಿಗೆ ಹಾಗೆ ಮಾಡುವ ಹಕ್ಕಿದೆ, ಆದರೆ ಇತರರಿಗೂ ವಾಸ್ತವ ಚಿತ್ರಣದೊಂದಿಗೆ ಪ್ರತಿಕ್ರಿಯಿಸುವ ಹಕ್ಕು ಇದೆ,” ಎಂದು ಮೋದಿ ಹೇಳಿದರು.