ಸಿಂಗಾಪೂರ್ ಮತ್ತು ಹಾಂಗ್ ಕಾಂಗ್ ನಲ್ಲಿ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಿಲ್ಲ : ಸಚಿವ ಪ್ರತಾಪ್ ರಾವ್ ಜಾಧವ್
ಪ್ರತಾಪ್ ರಾವ್ ಜಾಧವ್ | PC : PTI
ಹೊಸದಿಲ್ಲಿ: ವಾಣಿಜ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಸಿಂಗಪೂರ್ ಮತ್ತು ಹಾಂಗ್ ಕಾಂಗ್ ನಂಥ ದೇಶಗಳಲ್ಲಿ ಭಾರತದ ಮಸಾಲೆ ಪದಾರ್ಥಗಳನ್ನು ನಿಷೇಧಿಸಲಾಗಿಲ್ಲ ಎಂದು ಶುಕ್ರವಾರ ಕೇಂದ್ರ ಆರೋಗ್ಯ ರಾಜ್ಯ ಸಚಿವ ಪ್ರತಾಪ್ ರಾವ್ ಜಾಧವ್ ಲೋಕಸಭೆಗೆ ತಿಳಿಸಿದರು.
ಆದರೆ, ಇದಕ್ಕೂ ಮುಂಚೆ ಭಾರತದಿಂದ ರಫ್ತಾಗಿದ್ದ ಕೆಲವು ನಿರ್ದಿಷ್ಟ ಬ್ಯಾಚ್ ಗಳ ಮಸಾಲೆ ಮಿಶ್ರಣಗಳಲ್ಲಿ ಅನುಮತಿ ನೀಡಲಾಗಿದ್ದ ಮಿತಿಗಿಂತ ಹೆಚ್ಚು ಪ್ರಮಾಣದ ಎಥಿಲೀನ್ ಆಕ್ಸೈಡ್ ನ ಉಪಸ್ಥಿತಿ ಇದ್ದುದರಿಂದ, ಹಾಂಗ್ ಕಾಂಗ್ ಮತ್ತು ಸಿಂಗಾಪೂರ್ ನ ಆಹಾರ ಸುರಕ್ಷತಾ ಪ್ರಾಧಿಕಾರಗಳು ಅವನ್ನು ಹಿಂಪಡೆದಿದ್ದವು ಎಂದು ತಮ್ಮ ಲಿಖಿತ ಉತ್ತರದಲ್ಲಿ ಜಾಧವ್ ಮಾಹಿತಿ ನೀಡಿದರು.
ಈ ಸ್ಥಳಗಳಿಗೆ ರಫ್ತಾಗುವ ಮಸಾಲೆ ಪದಾರ್ಥಗಳನ್ನು ಕಡ್ಡಾಯ ಸಾಗಣೆ ಪೂರ್ವ ಪರೀಕ್ಷೆಗೊಳಪಡಿಸುವುದೂ ಸೇರಿದಂತೆ ವಿವಿಧ ಕ್ರಮಗಳನ್ನು ಮಸಾಲೆ ಪದಾರ್ಥಗಳ ಮಂಡಳಿ ಹಾಗೂ ವಾಣಿಜ್ಯ ಸಚಿವಾಲಯ ಕೈಗೊಂಡಿವೆ. ಇದರೊಂದಿಗೆ, ಎಲ್ಲ ಹಂತಗಳಲ್ಲೂ ಸಂಭವನೀಯ ಎಥಿಲೀನ್ ಆಕ್ಸೈಡ್ ಕಲಬೆರಕೆಯನ್ನು ತಪ್ಪಿಸಲು ರಫ್ತುದಾರರು ಪಾಲಿಸಬೇಕಾದ ಸಮಗ್ರ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿವೆ ಎಂದು ಅವರು ತಿಳಿಸಿದರು.
ಆಮದು ದೇಶದ ಬದಲಾಗುವ ಎಥಿಲೀನ್ ಆಕ್ಸೈಡ್ ಮಿತಿಯನ್ನು ಪಾಲಿಸಲು ಕಚ್ಚಾ ವಸ್ತುಗಳ ಸಂಗ್ರಹಣೆ, ಸಂಸ್ಕರಣೆ, ಪ್ಯಾಕಿಂಗ್, ಶೇಖರಣೆ, ಸಾಗಣೆ ಇತ್ಯಾದಿ ಸೇರಿದಂತೆ ವಿವಿಧ ಕ್ರಮಗಳನ್ನು ಒಳಗೊಳ್ಳಲಾಗಿದೆ. ಇದರೊಂದಿಗೆ ದೇಶಾದ್ಯಂತದ ಗ್ರಾಹಕರಿಗೆ ಸುರಕ್ಷಿತ ಆಹಾರ ಉತ್ಪನ್ನಗಳು ದೊರೆಯುವುದನ್ನು ಖಾತರಿಪಡಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (FSSAI) ಸಂಪೂರ್ಣ ಬದ್ಧವಾಗಿದೆ ಎಂದೂ ಜಾಧವ್ ಹೇಳಿದ್ದಾರೆ.