ಆಹಾರಕ್ಕಾಗಿ ಕಡಿಮೆ ವೆಚ್ಚ, ಐಚ್ಛಿಕ ವಸ್ತುಗಳ ಮೇಲೆ ಹೆಚ್ಚು ವೆಚ್ಚ ಮಾಡುತ್ತಿರುವ ಭಾರತೀಯರು: ಸರಕಾರಿ ಸಮೀಕ್ಷೆ
ಸಾಂದರ್ಭಿಕ ಚಿತ್ರ (Photo credit: businesstoday.in)
ಮುಂಬೈ: ಧಾನ್ಯಗಳಾದ ಅಕ್ಕಿ ಮತ್ತು ಗೋಧಿಯಂಥ ಆಹಾರ ವಸ್ತುಗಳ ಮೇಲೆ ಕಡಿಮೆ ವೆಚ್ಚ ಮಾಡುತ್ತಿರುವ ಭಾರತೀಯರು, ಸಂಸ್ಕರಿತ ಆಹಾರ ಹಾಗೂ ಗೃಹೋಪಯೋಗಿ ಉತ್ಪನ್ನಗಳಾದ ಟೆಲಿವಿಷನ್ ಹಾಗೂ ಫ್ರಿಡ್ಜ್ಗಳಂಥ ಐಚ್ಛಿಕ ವಸ್ತುಗಳ ಮೇಲೆ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ ಎಂಬ ಸಂಗತಿ ಸರಕಾರಿ ಸೇವನೆ ದತ್ತಾಂಶದಿಂದ ಬಹಿರಂಗಗೊಂಡಿದೆ ಎಂದು Reuters ವರದಿ ಮಾಡಿದೆ.
ಶನಿವಾರ ತಡ ರಾತ್ರಿ ಬಿಡುಗಡೆಯಾಗಿರುವ ಗೃಹ ಬಳಕೆ ವೆಚ್ಚ ಸಮೀಕ್ಷೆಯ ಪ್ರಕಾರ, 2011-12ರಲ್ಲಿ ಗ್ರಾಮೀಣ ಭಾಗದ ಪ್ರತಿ ವ್ಯಕ್ತಿ ವೆಚ್ಚ ಮಾಡುತ್ತಿದ್ದ ಮೊತ್ತ ರೂ. 1,430 ಇದ್ದದ್ದು, ಜುಲೈ ತಿಂಗಳಿಂದ ಪ್ರಾರಂಭಗೊಂಡಂತೆ ಕಳೆದ 12 ತಿಂಗಳ ಅವಧಿಯಲ್ಲಿ ರೂ. 3,733ಕ್ಕೆ ಏರಿಕೆಯಾಗಿದೆ. ಇದೇ ವೇಳೆ ನಗರ ಪ್ರದೇಶದ ಪ್ರತಿ ವ್ಯಕ್ತಿ ಮಾಡುತ್ತಿದ್ದ ವೆಚ್ಚ ರೂ. 2,630ರಿಂದ ರೂ. 6,459ಕ್ಕೆ ಏರಿಕೆಯಾಗಿದೆ.
ದತ್ತಾಂಶ ಗುಣಮಟ್ಟದ ಕುರಿತ ಸಮಸ್ಯೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು 2017-18ರ ನಡುವೆ ಈ ಸಮೀಕ್ಷೆಯನ್ನು ನಡೆಸಿರಲಿಲ್ಲ.
ಕಡಿಮೆ ಬಳಕೆಯ ಪ್ರವೃತ್ತಿಯನ್ನು ದತ್ತಾಂಶಗಳು ತೋರಿಸುತ್ತಿರುವುದರಿಂದ ಸರಕಾರವು ಆರ್ಥಿಕ ದತ್ತಾಂಶಗಳನ್ನು ಮುಚ್ಚಿಡುತ್ತಿದೆ ಎಂಬ ಆರೋಪಗಳನ್ನು ಸರಕಾರವು ಅಲ್ಲಗಳೆದಿತ್ತು.
ಈ ಸಮೀಕ್ಷೆಯು ಭಾರತದ ಗ್ರಾಹಕರ ಹಣದುಬ್ಬರ ಸೂಚ್ಯಂಕದ ಪರಾಮರ್ಶೆಯ ಆಧಾರವನ್ನು ಸೃಷ್ಟಿಸಲಿದೆ.
2011-12ರಲ್ಲಿ ಶೇ. 53ರಷ್ಟಿದ್ದ ಗ್ರಾಮೀಣ ಗ್ರಾಹಕರ ಆಹಾರ ಬಳಕೆಯ ಪ್ರಮಾಣವು ಶೇ. 46ಕ್ಕೆ ಕುಸಿದಿದ್ದು, ನಗರ ಪ್ರದೇಶದಲ್ಲಿ ಶೇ. 43ರಿಂದ ಶೇ. 36ಕ್ಕೆ ಕುಸಿದಿದೆ.
ಭಾರತೀಯರು ಅಕ್ಕಿ, ಗೋಧಿ, ಬೇಳೆಕಾಳುಗಳಂಥ ಆಹಾರ ಧಾನ್ಯಗಳ ಮೇಲೆ ಕಡಿಮೆ ವೆಚ್ಚ ಮಾಡುತ್ತಿದ್ದು, ಅದೇ ಹೊತ್ತಿನಲ್ಲಿ ತಂಪು ಪಾನೀಯಗಳು, ರಿಫ್ರೆಶ್ಮೆಂಟ್ಸ್ ಹಾಗೂ ಸಂಸ್ಕರಿತ ಆಹಾರಗಳ ಮೇಲೆ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ.
ಆಹಾರೇತರ ಪದಾರ್ಥಗಳ ಪೈಕಿ ಭಾರತೀಯ ಗ್ರಾಹಕರು ಸಾರಿಗೆ, ಗ್ರಾಹಕ ಸೇವೆಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಟೆಲಿವಿಷನ್ ಮತ್ತು ಫ್ರಿಡ್ಜ್ಗಳ ಮೇಲೆ ಹೆಚ್ಚು ವೆಚ್ಚ ಮಾಡುತ್ತಿದ್ದಾರೆ. ಈ ಫಲಿತಾಂಶವು ಲೋಕಸಭಾ ಚುನಾವಣೆಗೂ ಮುನ್ನ ಬಹಿರಂಗಗೊಂಡಿದೆ.
ಈ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ. 7.3ರಷ್ಟಿದ್ದು, ಮುಂದಿನ ವರ್ಷ ಶೇ. 7ರ ದರದಲ್ಲಿ ಜಿಡಿಪಿ ಬೆಳವಣಿಗೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿರುವ ಜನಸಂಖ್ಯೆಯ ಆದಾಯವು ಸ್ಥಿರವಾಗಿದ್ದು, ತೀವ್ರ ಹಣದುಬ್ಬರವನ್ನು ಎದುರಿಸುತ್ತಿದೆ.