ನಾಳೆ ಭಾರತದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭ, ಬಾಂಗ್ಲಾದೇಶ ಎದುರಾಳಿ

ಸಾಂದರ್ಭಿಕ ಚಿತ್ರ | PC : PTI
ದುಬೈ: ‘ಎ’ ಗುಂಪಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿರುವ ಟೀಮ್ ಇಂಡಿಯಾ 2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಪ್ರತೀ ಗುಂಪಿನಿಂದ ಕೇವಲ ಎರಡು ತಂಡಗಳು ಮಾತ್ರ ಸೆಮಿ ಫೈನಲ್ ಗೆ ಅರ್ಹತೆ ಪಡೆಯುತ್ತಿರುವ ಕಾರಣ ಪ್ರತಿ ಗ್ರೂಪ್ ಪಂದ್ಯವೂ ನಿರ್ಣಾಯಕವಾಗಿದೆ. ರೋಹಿತ್ ಪಡೆ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ತೋರಿದ್ದ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯವು ದುಬೈನ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತದ ಬೌಲಿಂಗ್ ವಿಭಾಗವು ಪ್ರಮುಖ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿ ಕಾಡದಂತೆ ಆಡುವುದೇ? ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಗತವೈಭವವನ್ನು ನೆನಪಿಸುತ್ತಾರೆಯೇ? ಶುಭಮನ್ ಗಿಲ್ ರಂತಹ ಯುವ ಆಟಗಾರರು ಬಹು ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಒತ್ತಡವನ್ನು ಮೀರಿ ಸ್ಥಿರ ಪ್ರದರ್ಶನ ನೀಡಬಲ್ಲರೇ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ತಂಡಗಳು ಉಂಟು ಮಾಡಿರುವ ಆಘಾತದಿಂದ ಭಾರತ ತಂಡ ಇನ್ನೂ ಹೊರಬಂದಿಲ್ಲ. ನಾಯಕ ರೋಹಿತ್ ಶರ್ಮಾ ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿರುವುದು, ಕೊಹ್ಲಿ ಅರ್ಧಶತಕ ಗಳಿಸಿರುವುದು ತಂಡಕ್ಕೆ ಸಮಾಧಾನ ತಂದಿದೆ. ಭಾರತವು ಗೌತಮ್ ಗಂಭೀರ್ ರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಮವಾಗಿ ಟಿ-20 ಹಾಗೂ ಏಕದಿನ ಸರಣಿಯಲ್ಲಿ 4-1 ಹಾಗೂ 3-0 ಅಂತರದಿಂದ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.
ಆಂಗ್ಲರ ವಿರುದ್ಧದ ಏಕದಿನ ಸರಣಿಯಲ್ಲಿ 2 ಅರ್ಧ ಶತಕ ಹಾಗೂ ಒಂದು ಶತಕ ಗಳಿಸಿದ್ದ ಗಿಲ್ ಸದ್ಯ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರಾಗುವ ಸವಾಲು ಸ್ವದೇಶಿ ಸರಣಿಗಿಂತ ಸಂಪೂರ್ಣ ಭಿನ್ನವಾಗಿದೆ.
‘ಎ’ ಗುಂಪಿನಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ಎದುರಾಳಿಗಳಾಗಿವೆ. ಒಂದು ಸೋಲು ಕೂಡ ಇಡೀ ಲೀಗ್ ಹಂತದ ಸಮೀಕರಣವನ್ನು ನಾಟಕೀಯವಾಗಿ ಬದಲಾಯಿಸಬಹುದು.
ಭಾರತವು 50 ಓವರ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬಾಂಗ್ಲಾದೇಶವನ್ನು ಎದುರಿಸುವ ಮೊದಲು ಕೆಲವು ಆಯ್ಕೆಯ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಕೆ.ಎಲ್.ರಾಹುಲ್ ಬ್ಯಾಟಿಂಗ್ ಕ್ರಮಾಂಕದಿಂದ ಗೊಂದಲ ಆರಂಭವಾಗುತ್ತದೆ. ರಾಹುಲ್ ತನ್ನ ನೆಚ್ಚಿನ ಕ್ರಮಾಂಕ 5ರಲ್ಲಿ ಆಡುತ್ತಾರೋ ಅಥವಾ ಆರನೇ ಕ್ರಮಾಂಕದಲ್ಲಿ ಆಡುತ್ತಾರೋ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ಅಂತಿಮ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.
ಟೀಮ್ ಮ್ಯಾನೇಜ್ಮೆಂಟ್ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಅಂತಿಮ ನಿರ್ಧಾರ ತಳೆಯಬಹುದು.
ಗಾಯಗೊಂಡಿರುವ ಬುಮ್ರಾ ಅನುಪಸ್ಥಿತಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಸರಿಯಾದ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ವೇಗದ ಬೌಲರ್ ಮುಹಮ್ಮದ್ ಶಮಿಗೆ ಹೊಸ ಚೆಂಡಿನ ಜೊತೆಗಾರನಾಗಿ ಕಣಕ್ಕಿಳಿಯಲು ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ರಾಣಾ ಇಲ್ಲಿಯ ತನಕ ತನ್ನ ಬೌಲಿಂಗ್ ನಲ್ಲಿ ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದು, ಅತ್ಯಂತ ನಿಧಾನಗತಿಯ ಪಿಚ್ ನಲ್ಲೂ ವೇಗ ಹಾಗೂ ಬೌನ್ಸ್ ಮೂಲಕ ಬ್ಯಾಟರ್ ಗಳನ್ನು ಕಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಈ ಕ್ಷಣದಲ್ಲಿ ಎಡಗೈ ವೇಗಿ ಅರ್ಷದೀಪ್ ಹೊಸ ಚೆಂಡಿನ ಜವಾಬ್ದಾರಿಯನ್ನು ಶಮಿ ಜೊತೆ ಹಂಚಿಕೊಳ್ಳುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಮತ್ತೊಂದೆಡೆ ಭಾರತ ತಂಡವು ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಮೂವರು ಸ್ಪಿನ್ನರ್ ಗಳನ್ನು ಆಡಿಸುವ ಸಾಧ್ಯತೆಯಿದೆ. ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಜೊತೆಗೆ ಮೂರನೇ ಸ್ಪಿನ್ನರ್ ಯಾರೆಂಬ ಪ್ರಶ್ನೆ ಕಾಡುತ್ತಿದೆ.
ಎಡಗೈ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ನಡುವೆ ಆಯ್ಕೆ ಮಾಡಬೇಕಾದ ಕಠಿಣ ಸವಾಲಿದೆ.
ಇತ್ತೀಚೆಗಿನ ಫಾರ್ಮ್ ಪರಿಗಣಿಸಿದರೆ ವರುಣ್ ಮೊದಲ ಆಯ್ಕೆಯಾಗಿದ್ದಾರೆ. ಆದರೆ, ಕುಲದೀಪ್ ಮಂಗಳವಾರ ನೆಟ್ ನಲ್ಲಿ ಕೆಲವು ಪ್ರಮುಖ ಬ್ಯಾಟರ್ಗಳೊಂದಿಗೆ ಅಭ್ಯಾಸ ನಡೆಸುವ ಮೂಲಕ ತಾನು ಸ್ಪರ್ಧೆಗೆ ಸಿದ್ದ ಎಂಬ ಸಂದೇಶ ನೀಡಿದ್ದಾರೆ.
ಈ ಹಿಂದಿನ ಜಾಗತಿಕ ಟೂರ್ನಿಗಳಲ್ಲಿ ತನ್ನನ್ನು ಕಾಡಿರುವ ಬಾಂಗ್ಲಾದೇಶ ತಂಡ ತಿರುಗಿಬೀಳುವ ಯಾವುದೇ ಅವಕಾಶ ನೀಡದಿರಲು ಭಾರತ ತಂಡ ಪಣತೊಟ್ಟಿದೆ.