2025ರಲ್ಲಿ ಭಾರತದ ಆರ್ಥಿಕತೆ ತುಸು ದುರ್ಬಲವಾಗಲಿದೆ : ಐಎಂಎಫ್
ಕ್ರಿಸ್ಟಾಲಿನಾ ಗಿಯೊರ್ಗಿವಾ | PTI
ಹೊಸದಿಲ್ಲಿ: ಜಾಗತಿಕವಾಗಿ ಆರ್ಥಿಕತೆಯು ಸುಸ್ಥಿರ ಬೆಳವಣಿಗೆಯನ್ನು ಕಾಣುತ್ತಿರುವ ಹೊರತಾಗಿಯೂ ಭಾರತದ ಆರ್ಥಿಕತೆಯು 2025ರಲ್ಲಿ ತುಸು ದುರ್ಬಲವಾಗುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಾಲಿನಾ ಗಿಯೊರ್ಗಿವಾ ಅವರು ಶುಕ್ರವಾರ ತಿಳಿಸಿದ್ದಾರೆ.
"ಅಮೆರಿಕದ ಆರ್ಥಿಕತೆಯು ನಾವು ಈ ಮೊದಲು ನಿರೀಕ್ಷಿಸಿದ್ದಕ್ಕಂತ ತುಸು ಹೆಚ್ಚು ಉತ್ತಮಗೊಳ್ಳಲಿದೆ. ಯುರೋಪ್ ಒಕ್ಕೂಟದ ಆರ್ಥಿಕತೆಯು ಎಲ್ಲೋ ಒಂದುಕಡೆ ಸ್ಥಗಿತಗೊಳ್ಳಲಿದೆ ಮತ್ತು ಭಾರತದ ಆರ್ಥಿಕತೆಯು ತುಸು ದುರ್ಬಲಗೊಳ್ಳಲಿದೆ’’ ಎಂದು ಗಿಯೊರ್ಗಿನಿ ಅವರು ವಾರ್ಷಿಕ ದುಂಡು ಮೇಜಿನ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರವು ನಾಲ್ಕು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಅಂದರೆ ಶೇ.6.4ಕ್ಕೆ ಕುಸಿಯಲಿದೆ. 2023-2024ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ.8.2 ಆಗಿತ್ತೆಂದು ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯವು ಮಂಗಳವಾರ ಬಿಡುಗಡೆಗೊಳಿಸಿದ ನೂತನ ಹಣಕಾಸು ವರ್ಷದ ಮುನ್ನಂದಾಜಿನಲ್ಲಿ ತಿಳಿಸಿದೆ.
ಕೇಂದ್ರ ಅಂಕಿಅಂಶ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯವು ಬಿಡುಗಡೆಗೊಳಿಸಿದ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜು ದರವು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದಕ್ಕಿಂತ (ಶೇ.6.6)ಕ್ಕಿಂತ ತುಸು ಕಡಿಮೆ ಇದೆ. ಉತ್ಪಾದನೆ ಹಾಗೂ ಹೂಡಿಕೆ ಬೆಳವಣಿಗೆಯಲ್ಲಿ ಸಂಭಾವ್ಯ ಕುಸಿತವುಂಟಾಗಿರುವ ಕಾರಣದಿಂದಾಗಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದರದಲ್ಲಿ ಕುಸಿತವಾಗಲಿದೆ ಎಂದು ವರದಿ ಹೇಳಿದೆ.
ಉತ್ಪಾದನಾ ವಲಯದ ಬೆಳವಣಿಗೆ ದರವು ಕಳೆದ ವರ್ಷ 9.9 ಶೇ. ಆಗಿದ್ದರೆ, ಈ ಸಾಲಿನಲ್ಲಿ ಅದು 5.3 ಶೇಕಡಕ್ಕೆ ಇಳಿಯಲಿದೆ. ಹೂಡಿಕೆ ಬೆಳವಣಿಗೆ ದರದಲ್ಲಿಯೂ ಶೇ.6.4ರಷ್ಟು ಕುಸಿತವುಂಟಾಗಲಿದೆ. ಕಳೆದ ವರ್ಷ ಹೂಡಿಕೆ ಬೆಳವಣಿಗೆ ದರವು ಶೇ.9 ಆಗಿತ್ತು. ಕೃಷಿ ವಲಯವು ಶೇ.3.8ರಷ್ಟು ಬೆಳೆಯುವ ನಿರೀಕ್ಷೆಯಿದ್ದು, ಹಿಂದಿನ ವರ್ಷಕ್ಕಿಂತ ಶೇ.1.4ರಷ್ಟು ಹೆಚ್ಚಾಗಲಿದೆ.
ಮುಂಬರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಹೇಗೆ ಕಾರ್ಯನಿರ್ವಹಿಸಲಿವೆ ಎಂಬ ಬಗ್ಗೆ ಈ ಮುನ್ನಂದಾಜುಗಳು ವಿಸ್ತೃತವಾದ ಚಿತ್ರಣವನ್ನು ನೀಡುತ್ತವೆ ಮತ್ತು ಬಜೆಟ್ ಅನುದಾನಗಳ ನಿಗದಿಗೆ ಹಣಕಾಸು ಸಚಿವಾಲಯಕ್ಕೆ ನೆರವಾಗುತ್ತವೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರಲ್ಲಿ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.