ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಮುಂಬೈನಲ್ಲಿ ಇಂಡಿಯಾ ಒಕ್ಕೂಟದಿಂದ ಬೃಹತ್ ʼಚಪ್ಪಲಿ ಸೇವೆʼ ಪ್ರತಿಭಟನೆ
Photo credit: NDTV
ಮುಂಬೈ: ಸಿಂಧುದುರ್ಗದ ಮಾಲ್ವಾನ್ನಲ್ಲಿ ಛತ್ರಪತಿ ಶಿವಾಜಿ ಅವರ 35 ಅಡಿ ಎತ್ತರದ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂಡಿಯಾ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಬೃಹತ್ ರವಿವಾರ ಬೃಹತ್ ʼಚಪ್ಪಲಿ ಸೇವೆʼ ಪ್ರತಿಭಟನೆ ಆಯೋಜಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಭಾರೀ ಭದ್ರತೆಯನ್ನು ನಿಯೋಜಿಸಿದೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿ ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದೆ. ಪ್ರತಿಪಕ್ಷಗಳ ಆಂದೋಲನವನ್ನು ಎದುರಿಸಲು ಪಕ್ಷವು ಮೆರವಣಿಗೆಯನ್ನು ಯೋಜಿಸಿದೆ.
ಗೇಟ್ವೇ ಆಫ್ ಇಂಡಿಯಾದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಜಮಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಇಂಡಿಯಾ ಒಕ್ಕೂಟದ ಹಿರಿಯ ನಾಯಕರಾದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಫೋರ್ಟ್ ಪ್ರದೇಶದಿಂದ ಗೇಟ್ವೇ ಆಫ್ ಇಂಡಿಯಾದವರೆಗೆ ಪ್ರತಿಪಕ್ಷ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ವಿಪಕ್ಷ ಒಕ್ಕೂಟವು ತನ್ನ ಆಂದೋಲನವನ್ನು ಚಪ್ಪಲಿ ಸೇವೆ ಪ್ರತಿಭಟನೆ ಎಂದು ಕರೆದಿದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದ ಹೆಮ್ಮೆ ಶಿವಾಜಿಯ ಪಾದಗಳಿಗೆ ನಮಸ್ಕರಿಸಲು ಮೆರವಣಿಗೆಯಲ್ಲಿ ಪಾಲ್ಗೊಳ್ಳಿ ಎಂದು ಟ್ವೀಟ್ ಮಾಡಿದೆ. ಭ್ರಷ್ಟ ಶಿವದ್ರೋಹಿಗಳಿಗೆ ಕ್ಷಮೆ ಇಲ್ಲ ಎಂದು ಎನ್ಸಿಪಿಯ ಶರದ್ ಪವಾರ್ ಬಣ ಹೇಳಿದೆ. ಕಳಪೆ ಕೆಲಸ ಮಾಡಿದ, ಭ್ರಷ್ಟಾಚಾರ ಎಸಗಿದ, ಶಿವಾಜಿಯನ್ನು ಅವಮಾನಿಸಿದ ಶಿವದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕ ಹೇಳಿದೆ.
ಕಳೆದ 8 ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದ ಘಟನೆ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಸಂಚಲನ ಮೂಡಿಸಿದೆ.