‘ಜೈವಿಕ ಇಂಧನ ಮೈತ್ರಿಕೂಟ’ಕ್ಕೆ ಭಾರತ ಚಾಲನೆ
ಪೆಟ್ರೋಲ್ ನಲ್ಲಿ ಶೇ.20ರವರೆಗೆ ಎಥೆನಾಲ್ ಸಮ್ಮಿಶ್ರಣಕ್ಕೆ ಉಪಕ್ರಮ
Photo: ANI
ಹೊಸದಿಲ್ಲಿ: ‘ಜಾಗತಿಕ ಜೈವಿಕ ಇಂಧನ ಮೈತ್ರಿಕೂಟ’ದ ಆರಂಭವನ್ನು ಭಾರತ ಶನಿವಾರ ಘೋಷಿಸಿದ್ದು, ಈ ಉಪಕ್ರಮದಲ್ಲಿ ತನ್ನೊಂದಿಗೆ ಕೈಜೋಡಿಸುವಂತೆ ಜಿ20 ರಾಷ್ಟ್ರಗಳಿಗೆ ಕರೆ ನೀಡಿದೆ.
‘ಒಂದು ಭೂಮಿ’ ಕುರಿತ ಜಿ20 ಶೃಂಗಸಭೆಯ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿಯವರು, ಪರಿಸರ ಹಾಗೂ ಹವಾಮಾನ ವೀಕ್ಷಣೆಗಾಗಿನ ಜಿ20 ಉಪಗ್ರಹ ಮಿಶನ್’ನ ಆರಂಭವನ್ನು ಪ್ರಸ್ತಾವಿಸಿದರು.
‘‘ಇಂಧನ ಮಿಶ್ರಣ ಕ್ಷೇತ್ರದಲ್ಲಿ ದಕ್ಷತೆಯನ್ನು ಸಾಧಿಸಲು ಎಲ್ಲಾ ದೇಶಗಳು ಜೊತೆಯಾಗಿ ಶ್ರಮಿಸುವುದು ಇಂದಿನ ಅಗತ್ಯವಾಗಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ನ ಸಮ್ಮಿಶ್ರಣವನ್ನು ಶೇ.20ರಷ್ಟು ಪ್ರಮಾಣದವರೆಗೆ ಕೊಂಡೊಯ್ಯುವುದು ನಮ್ಮ ಪ್ರಸ್ತಾವನೆಯಾಗಿದೆ’’ ಎಂದವರು ಹೇಳಿದ್ದಾರೆ.
ಶ್ರೇಷ್ಠವಾದ ಜಾಗತಿಕವಾದ ಒಳಿತಿಗಾಗಿ ಪೆಟ್ರೋಲ್ ಜೊತೆ ಎಥೆನಾಲ್ ನ ಸಮ್ಮಿಶ್ರಣವನ್ನು ಅಭಿವೃದ್ಧಿಪಡಿಸಲು ನಾವು ಶ್ರಮಿಸಬೇಕಾಗಿದೆ. ಆ ಮೂಲಕ ಹವಾಮಾನದ ಸುರಕ್ಷತೆಗಾಗಿ ಸುಸ್ಥಿರವಾದ ಇಂಧನ ಪೂರೈಕೆಯನ್ನು ಖಾತರಿಪಡಿಸಬಹುದಾಗಿದೆ’’ ಎಂದು ಮೋದಿ ಹೇಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್, ಸೌದಿ ಅರೇಬಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಬ್ರಿಟನ್ ಪ್ರಧಾನಿ ರಿಶಿ ಸುನಕ್ ಮತ್ತಿತರರು ಗೋಷ್ಠಿಯಲ್ಲಿ ಹಾಜರಿದ್ದರು.