ಚೀನಾ ಸಹಿತ ಯಾವುದೇ ದೇಶದಿಂದ ಆಮದಿಗೆ ಅನುಮತಿಸಲಿರುವ ಭಾರತದ ಹೊಸ ಇವಿ ನೀತಿ
Photo: NDTV
ಹೊಸದಿಲ್ಲಿ: ಭಾರತದ ಹೊಸ ಇವಿ ನೀತಿಯನ್ವಯ ಚೀನಾ ಸಹಿತ ಯಾವುದೇ ದೇಶದಿಂದ ಇಲೆಕ್ಟ್ರಿಕ್ ವಾಹನಗಳ ಆಮದಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಟಿವಿ ವಾಹನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ತಿಂಗಳು ಭಾರತ ಸರ್ಕಾರ ಅನುಮೋದನೆ ನೀಡಿದ ಹೊಸ ಇವಿ ನೀತಿಯಡಿಯಲ್ಲಿ ಆಮದು ಸುಂಕ ವಿನಾಯಿತಿಯನ್ನು ದೇಶದಲ್ಲಿ ಕನಿಷ್ಠ 500 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಇವಿ ತಯಾರಿಕಾ ಘಟಕಗಳಿಗೆ ನೀಡಲಾಗುವುದು.
ಇವಿ ಪ್ಯಾಸೆಂಜರ್ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಶೇ 15ರಷ್ಟು ಕಸ್ಟಮ್ಸ್/ಆಮದು ಸುಂಕದಲ್ಲಿ ಸೀಮಿತ ಸಂಖ್ಯೆಯ 35000 ಅಮೆರಿಕನ್ ಡಾಲರ್ ಮೌಲ್ಯದ ವಾಹನಗಳನ್ನು ಸರ್ಕಾರದಿಂದ ಅನುಮೋದನೆ ದೊರೆತ ಐದು ವರ್ಷಗಳ ಕಾಲ ಆಮದು ಮಾಡಲು ಅನುಮತಿಯಿದೆ. ಸದ್ಯ ಇಂತಹ ಕಾರುಗಳಿಗೆ ಶೇ 70ರಿಂದ 100ರಷ್ಟು ಆಮದು ಸುಂಕ ಅದರ ಇಂಜಿನ್ ಗಾತ್ರ ಮತ್ರು ವೆಚ್ಚ, ವಿಮೆ ಆಧಾರದಲ್ಲಿ ವಿಧಿಸಲಾಗುತ್ತದೆ.
ಸರ್ಕಾರದ ಈ ನೀತಿಯು ದೇಶೀಯ ತಯಾರಿಕರನ್ನು ಬಾಧಿಸುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಆದರೆ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ವರದಿ ಪ್ರಕಾರ ಈ ನೀತಿಯಿಂದಾಗಿ ಮುಂದಿನ ಕೆಲ ವರ್ಷಗಳಲ್ಲಿ ದೇಶದಲ್ಲಿರುವ ಪ್ರತಿ ಮೂರನೇ ಇಲೆಕ್ಟ್ರಿಕ್ ವಾಹನ ಅಥವಾ ಪ್ಯಾಸೆಂಜರ್, ಕಮರ್ಷಿಯಲ್ ವಾಹನಗಳು ಚೀನೀ ಸಂಸ್ಥೆಗಳು ಭಾರತದಲ್ಲಿ ಇಲ್ಲಿನ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಿರ್ಮಿಸಿದ ವಾಹನಗಳಾಗಲಿವೆ.