ಇಂಡಿಗೊ ವಿಮಾನಯಾನ ಸಂಸ್ಥೆಗೆ ರೂ. 1.2 ಕೋಟಿ ದಂಡ: ಕಾರಣ ಏನು ಗೊತ್ತೇ?
ಹೊಸದಿಲ್ಲಿ: ವಿಮಾನ ವಿಳಂಬವಾದ ಸಂದರ್ಭದಲ್ಲಿ ವಿಮಾನಯಾನಿಗಳು ವಿಮಾನದ ಬಳಿ ಡಾಂಬರು ಹಾಕಿದ ಜಾಗದಲ್ಲಿ ಆಹಾರ ಸೇವನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದ ವಿಮಾನಯಾನಕ್ಕೆ ಹೆಸರಾಗಿರುವ ಇಂಡಿಗೊ ಸಂಸ್ಥೆಗೆ ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) 1.2 ಕೋಟಿ ರೂಪಾಯಿ ದಂಡ ವಿಧಿಸಿದೆ.
ಈ ವಿಡಿಯೊವನ್ನು ಭಾರತದ ವೈಮಾನಿಕ ನಿಯಂತ್ರಣ ಸಂಸ್ಥೆಯಾದ ಡಿಜಿಸಿಎ ಕೂಡಾ ಗಮನಕ್ಕೆ ತೆಗೆದುಕೊಂಡಿದ್ದು, ಈ ಉಲ್ಲಂಘನೆಗಾಗಿ 30 ಲಕ್ಷ ರೂಪಾಯಿ ಪಾವತಿಸುವಂತೆ ಮುಂಬೈ ವಿಮಾನ ನಿಲ್ದಾಣಕ್ಕೆ ಸೂಚನೆ ನೀಡಿದೆ. ಡಾಂಬರು ಜಾಗದಲ್ಲಿ ಪ್ರಯಾಣಿಕರು ಆಹಾರ ಸೇವಿಸುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮುಂಬೈ ವಿಮಾನ ನಿಲ್ದಾಣ ಹಾಗೂ ಇಂಡಿಗೊ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಧಿಸಿರುವ ಈ ಅತಿದೊಡ್ಡ ಮೊತ್ತದ ದಂಡವನ್ನು 30 ದಿನಗಳ ಒಳಗಾಗಿ ಪಾವತಿಸುವಂತೆ ಬಿಸಿಎಎಸ್ ಸೂಚಿಸಿದೆ.
ಜನವರಿ 15ರಂದು ಎರಡು ಇಂಡಿಗೊ ವಿಮಾನದ ಪ್ರಯಾಣಿಕರು ಸಿಎಸ್ಎಂಐ ವಿಮಾನ ನಿಲ್ದಾಣದ ಏಪ್ರಾನ್ನಲ್ಲಿ ಸುಧೀರ್ಘ ಅವಧಿಗೆ ಇರುವುದು ಕಂಡುಬಂದಿದೆ. ಇದು ಡಿಜಿಸಿಎ ವೈಮಾನಿಕ ಸುರಕ್ಷಾ ಸುತ್ತೋಲೆ 04 ಆಫ್ 2007ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.