ಬಾಂಬ್ ಬೆದರಿಕೆ: ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ
ಸಾಂದರ್ಭಿಕ ಚಿತ್ರ (PTI)
ನಾಗಪುರ: ಜಬಲ್ಪುರ್ ನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿನ ಶೌಚಾಲಯದ ಕಮೋಡ್ ನಲ್ಲಿ ‘ಸ್ಪೋಟ’ ಎಂಬ ತುಂಡು ಕಾಗದ ದೊರೆತಿದ್ದರಿಂದ, ಆ ವಿಮಾನವು ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಈ ತುಂಡು ಕಾಗದ ದೊರೆಯುತ್ತಿದ್ದಂತೆಯೆ 69 ಮಂದಿ ಪ್ರಯಾಣಿಕರು ಹಾಗೂ ನಾಲ್ವರು ವಿಮಾನ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಮಾರ್ಗವನ್ನು ನಾಗಪುರ ವಿಮಾನ ನಿಲ್ದಾಣಕ್ಕೆ ಬದಲಿಸಲಾಗಿದೆ.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಕಂಡು ಬಂದಿರುವುದರಿಂದ ವಿಮಾನ ಸಂಖ್ಯೆ 6E 48PQವನ್ನು ನಾಗಪುರ ವಿಮಾನ ನಿಲ್ದಾಣಕ್ಕೆ ಬದಲಿಸಲಾಗುತ್ತಿದೆ ಎಂದು ವಿಮಾನ ಸಂಚಾರ ನಿಯಂತ್ರಣ ಗೋಪುರವು ನಿಲ್ದಾಣದಲ್ಲಿನ ನಿಲ್ದಾಣ ಕಾರ್ಯಾಚರಣೆ ಪಾಲನೆ ತಪಾಸಣಾ ಠಾಣೆಗೆ ಸಂದೇಶ ರವಾನಿಸಿತ್ತು ಎಂದು ಹೇಳಲಾಗಿದೆ. ಈ ಸಂದೇಶವನ್ನು ಬೆಳಗ್ಗೆ ಸುಮಾರು 9 ಗಂಟೆಗೆ ಸಂವಹನ ಮಾಡಲಾಗಿದ್ದು, ಭಾರಿ ದುರಂತವನ್ನು ತಪ್ಪಿಸಲು ವಿಮಾನದ ನಿಲ್ದಾಣದ ಸಂಪೂರ್ಣ ಭದ್ರತಾ ವ್ಯವಸ್ಥೆಯು ಸರ್ವ ಸನ್ನದ್ಧವಾಗಿತ್ತು ಎಂದು ಮೂಲಗಳು ಹೇಳಿವೆ.
ಈ ಸಂದರ್ಭದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಲಾಗಿದೆ. ವಿಮಾನವು ಬೆಳಗ್ಗೆ 9.20ಕ್ಕೆ ಭೂಸ್ಪರ್ಶ ಮಾಡಿದ ನಂತರ, ವಿಮಾನದಲ್ಲಿದ್ದ ಪ್ರಯಾಣಿಕರನ್ನೆಲ್ಲ ತೆರವುಗೊಳಿಸಲಾಗಿದೆ. ಅವರ ಕೈಚೀಲಗಳನ್ನು ಪರಿಶೀಲಿಸಲಾಗಿದ್ದು, ಇನ್ನಿತರ ತನಿಖೆಗಳು ಮುಂದುವರಿದಿವೆ ಎಂದು ಮೂಲಗಳು ತಿಳಿಸಿವೆ.