ಇಂಡಿಗೋ ವಿಮಾನಗಳ ತಾಂತ್ರಿಕ ಸಮಸ್ಯೆ : ಇಸ್ತಾಂಬುಲ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರಕ್ಕೂ ಅಧಿಕ ಭಾರತೀಯ ಪ್ರಯಾಣಿಕರು
PC : PTI
ಹೊಸದಿಲ್ಲಿ : ಇಸ್ತಾಂಬುಲ್-ಭಾರತ ವಾಯುವಲಯದಲ್ಲಿ ಹಾರಾಟ ನಡೆಸುತ್ತಿರುವ ಇಂಡಿಗೋ ವಾಯುಯಾನಸಂಸ್ಥೆ ವಿಮಾನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಲಿದ್ದ ಸಾವಿರಕ್ಕೂ ಅಧಿಕ ಪ್ರಯಾಣಿಕರು ಟರ್ಕಿಯ ಇಸ್ತಾಂಬುಲ್ ವಿಮಾನನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರಲು ಇಂಡಿಗೊ ಸಂಸ್ಥೆಯು ಪರಿಹಾರ ವಿಮಾನವನ್ನು ಕಳುಹಿಸಿದ್ದು, 20 ತಾಸುಗಳೊಳಗೆ ಅದು ಭಾರತಕ್ಕೆ ಹಿಂತಿರುಗುವ ನಿರೀಕ್ಷೆಯಿದೆ.
ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಇಸ್ತಾಂಬುಲ್-ದಿಲ್ಲಿ ಹಾಗೂ ಇಸ್ತಾಂಬುಲ್-ಮುಂಬೈ ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿತ್ತು. ಯಾವುದೇ ಪರ್ಯಾಯ ವಿಮಾನಯಾನದ ಏರ್ಪಾಡನ್ನು ಮಾಡದೆ ಇದ್ದುದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕುವಂತಾಗಿದೆ.
ಈ ವಾಯುವಲಯದಲ್ಲಿ ಇಂಡಿಗೋ ವಾಯುಯಾನಸಂಸ್ಥೆಯು ಬೋಯಿಂಗ್ 777 ವಿಮಾನಗಳ ಹಾರಾಟವನ್ನು ನಡೆಸುತ್ತಿದ್ದು, ಅವು 500ಕ್ಕೂ ಅಧಿಕ ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದೆ. ಇಸ್ತಾಂಬುಲ್ನಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಯಾಣಿಕರು ಹಾಗೂ ವಾಯುಯಾನ ಸಂಸ್ಥೆಯ ಜೊತೆ ಸಂಪರ್ಕದಲ್ಲಿರುವುದಾಗಿ ಟರ್ಕಿಯಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ ಈ ಪ್ರಯಾಣಿಕರಿಗೆ ವಾಸ್ತವ್ಯ ಹಾಗೂ ಆಹಾರದ ಏರ್ಪಾಡುಗಳನ್ನು ಮಾಡಲಾಗಿದೆಯೆಂದು ಅದು ಹೇಳಿದೆ.
ಈ ತಿಂಗಳ ಆರಂಭದಲ್ಲಿ ಏರ್ಹೆಲ್ಪ್ ಸಂಸ್ಥೆಯು ಪ್ರಕಟಿಸಿದ ವಾಯುಯಾನ ಸಂಸ್ಥೆಗಳ ಸೇವಾದಕ್ಷತೆಯ ರ್ಯಾಂಕಿಂಗ್ನಲ್ಲಿ ಇಂಡಿಗೊ ಸಂಸ್ಥೆಯನ್ನು ಜಗತ್ತಿನ ಅತ್ಯಂತ ಕಳಪೆ ವಿಮಾನಯಾನಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಳಿಸಿದ್ದು, 109ರಲ್ಲಿ 103ನೇ ಸ್ಥಾನವನ್ನು ನೀಡಿದೆ. ಇತರ ವಾಯುಯಾನ ಸಂಸ್ಥೆಗಳಾದ ಏರ್ ಇಂಡಿಯಾಗೆ 61 ಹಾಗೂ ಏರ್ಏಶ್ಯಾಗೆ 94ನೇ ರ್ಯಾಂಕ್ ಅನ್ನು ಅದು ನೀಡಿದೆ.