ದಿಲ್ಲಿ-ಬೆಂಗಳೂರು ಮಾರ್ಗದ ಆಯ್ದ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್ ಆಸನ ಸೌಲಭ್ಯ ಪ್ರಾರಂಭಿಸಲಿರುವ ಇಂಡಿಗೊ
ಇಂಡಿಗೊ | PC : PTI
ಮುಂಬೈ: ಜನವರಿ 10ರಿಂದ ದಿಲ್ಲಿ-ಬೆಂಗಳೂರು ಮಾರ್ಗದ ಆಯ್ದ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್ ಆಸನ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುವುದು ಎಂದು ಸೋಮವಾರ ದೇಶೀಯ ವಿಮಾನ ಯಾನ ಸಂಸ್ಥೆ ಇಂಡಿಗೊ ಪ್ರಕಟಿಸಿದೆ.
ಇಂಡಿಗೊ ಸ್ಟ್ರೆಚ್ ಎಂದು ಹೆಸರಿಸಲಾಗಿರುವ ಸುಸಜ್ಜಿತ ಬಿಸಿನೆಸ್ ಕ್ಲಾಸ್ ಸೌಲಭ್ಯವನ್ನು ಗುರುಗ್ರಾಮ ಮೂಲದ ವಿಮಾನ ಯಾನ ಸಂಸ್ಥೆಯಾದ ಇಂಡಿಗೊ ಕಳೆದ ತಿಂಗಳು ದಿಲ್ಲಿ-ಮುಂಬೈ ಮಾರ್ಗದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಿತ್ತು.
ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ದಿಲ್ಲಿ ಮತ್ತು ಬೆಂಗಳೂರು ನಡುವಿನ ಎಲ್ಲ 15 ವಿಮಾನಗಳು ಬಿಸಿನೆಸ್ ಕ್ಲಾಸ್ ಆಸನಗಳೊಂದಿಗೆ ಕಾರ್ಯಾಚರಿಸಲಿದ್ದು, ಮುಂದಿನ ಜನವರಿ ಆರಂಭದಲ್ಲಿ ದಿಲ್ಲಿ-ಮುಂಬೈ ಮಾರ್ಗದಲ್ಲಿ ಕಾರ್ಯಾಚರಿಸುವ ಎಲ್ಲ 20 ವಿಮಾನಗಳು ಬಿಸಿನೆಸ್ ಕ್ಲಾಸ್ ಆಸನ ಸೌಲಭ್ಯವನ್ನು ಹೊಂದಿರಲಿವೆ ಎಂದು ಇಂಡಿಗೊ ಸಂಸ್ಥೆ ತಿಳಿಸಿದೆ.
“ನಮ್ಮ ಬಿಸಿನೆಸ್ ಕ್ಲಾಸ್ ದರ್ಜೆಯ ಸೌಲಭ್ಯವಾದ ಇಂಡಿಗೊ ಸ್ಟ್ರೆಚ್ ಮೂಲಕ 12 ಭಾರತೀಯ ಮಾರ್ಗಗಳಲ್ಲಿ ಸೇವೆ ಸಲ್ಲಿಸಲಾಗುವುದು ಎಂದು ಈ ಹಿಂದೆ ಪ್ರಕಟಿಸಿದಂತೆ, ದಿಲ್ಲಿ-ಬೆಂಗಳೂರು ಮಾರ್ಗವನ್ನು ನಮ್ಮ ಎರಡನೆ ಮಾರ್ಗವಾಗಿ ಸೇರ್ಪಡೆ ಮಾಡಿದ್ದೇವೆ. ಶೀಘ್ರದಲ್ಲೇ ನಾವು ದಿಲ್ಲಿ ಮತ್ತು ಚೆನ್ನೈ ನಡುವೆ ಇಂಡಿಗೊ ಸ್ಟ್ರೆಚ್ ವಿಮಾನಗಳನ್ನು ಪ್ರಕಟಿಸಲಿದ್ದೇವೆ” ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.
ಇಂಡಿಗೊ ವಿಮಾನಗಳಲ್ಲಿ ಬಿಸಿನೆಸ್ ಕ್ಲಾಸ್ ಅನ್ನು ಕಾಯ್ದಿರಿಸುವ ಗ್ರಾಹಕರು ಆದ್ಯತೆಯ ತಪಾಸಣೆ, ಯಾವಾಗ ಬೇಕಾದರೂ ವಿಮಾನವೇರುವ ಅವಕಾಶ, ಮುಂಗಡ ಆಸನ ಆಯ್ಕೆ ಹಾಗೂ 30 ಕೆಜಿ ಬ್ಯಾಗ್ ಗಳ ಪರಿಶೀಲನೆಯಿಂದ ಪ್ರಾರಂಭಗೊಂಡು, 12 ಕೆಜಿ ತೂಕದ ಬ್ಯಾಗ್ ಅನ್ನು ಕ್ಯಾಬಿನ್ ನಲ್ಲಿಡುವ ಅವಕಾಶ ಸೇರಿದಂತೆ ಹೆಚ್ಚುವರಿ ಬ್ಯಾಗೇಜ್ ಅವಕಾಶವಲ್ಲದೆ, ಶೂನ್ಯ ಅನುಕೂಲ ಶುಲ್ಕದಂಥ ಪೂರಕ ಲಾಭಗಳನ್ನು ಪಡೆಯಬಹುದು ಎಂದು ಇಂಡಿಗೊ ಹೇಳಿದೆ.