2024ರಲ್ಲಿ ಸೈಬರ್ ವಂಚಕರಿಗೆ 60 ಕೋಟಿ ರೂ. ಕಳೆದುಕೊಂಡ ಇಂದೋರ್ ನಾಗರಿಕರು!
ಸಂತ್ರಸ್ತರ ಪೈಕಿ ಹೈಕೋರ್ಟ್ ನ್ಯಾಯಾಧೀಶರೂ ಸೇರಿದ್ದಾರೆ: ಪೊಲೀಸರು
ಸಾಂದರ್ಭಿಕ ಚಿತ್ರ | PC : PTI
ಇಂದೋರ್: 2024ರಲ್ಲಿ ಸೈಬರ್ ವಂಚಕರು ಮಧ್ಯಪ್ರದೇಶದ ಇಂದೋರ್ ನಾಗರಿಕರಿಗೆ 60 ಕೋಟಿ ರೂ. ವಂಚಿಸಿದ್ದು, ಸಂತ್ರಸ್ತರ ಪೈಕಿ ಓರ್ವರು, ಹೈಕೋರ್ಟ್ ನ ಮಾಜಿ ನ್ಯಾಯಾಧೀಶರೂ ಸೇರಿದ್ದಾರೆ ಎಂದು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
60 ಕೋಟಿ ರೂ. ಪೈಕಿ ಒಟ್ಟಾರೆ 12.50 ಕೋಟಿ ರೂ. ಮೊತ್ತವನ್ನು ಮರು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ಸಂತ್ರಸ್ತರಿಗೆ ಹಿಂದಿರುಗಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಾಂಡೋತಿಯ ತಿಳಿಸಿದ್ದಾರೆ.
“ನಾವು ಈ ವರ್ಷ 10,000ಕ್ಕೂ ಹೆಚ್ಚು ಸೈಬರ್ ವಂಚನೆಯ ದೂರುಗಳನ್ನು ಸ್ವೀಕರಿಸಿದ್ದೇವೆ. ಆರೋಪಿಗಳು 60 ಕೋಟಿ ರೂ. ಮೊತ್ತವನ್ನು ಸಂತ್ರಸ್ತರಿಗೆ ವಂಚಿಸಿದ್ದಾರೆ. ನಾವು ಈ ಪೈಕಿ 12.50 ಕೋಟಿ ರೂ. ಮೊತ್ತವನ್ನು ಸಂತ್ರಸ್ತರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದು, ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 52 ಮಂದಿಯನ್ನೂ ಬಂಧಿಸಿದ್ದೇವೆ. ಸುಮಾರು ಶೇ. 25ರಷ್ಟು ದೂರುಗಳು ಕ್ರಿಪ್ಟೊ ಕರೆನ್ಸಿ ಹೂಡಿಕೆಗೆ ಸಂಬಂಧಿಸಿವೆ. ಡಿಜಿಟಲ್ ಬಂಧನದ ಪ್ರಕರಣಗಳೂ ಏರಿಕೆಯಾಗಿವೆ” ಎಂದು ಅವರು ಹೇಳಿದ್ದಾರೆ.
“ಸಂತ್ರಸ್ತರಲ್ಲಿ ಸುಶಿಕ್ಷಿತ ವೃತ್ತಿಪರರೂ ಸೇರಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರೊಬ್ಬರೂ ಈ ವಂಚನೆಯ ಸಂತ್ರಸ್ತರಾಗಿದ್ದಾರೆ. ನಾವು ದೇಶಾದ್ಯಂತ 55 ಸೈಬರ್ ವಂಚನೆ ಪೀಡಿತ ಸ್ಥಳಗಳನ್ನು ಗುರುತಿಸಿದ್ದೇವೆ. ಈ ಸ್ಥಳಗಳು ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ದಿಲ್ಲಿ, ಹರ್ಯಾಣ, ರಾಜಸ್ಥಾನ ಹಾಗೂ ಗುಜರಾತ್ ನಂಥ ರಾಜ್ಯಗಳಲ್ಲಿವೆ” ಎಂದೂ ಅವರು ತಿಳಿಸಿದ್ದಾರೆ.