ಮಧ್ಯ ಪ್ರದೇಶ| ಸಾಕು ನಾಯಿಗಳ ವಿಚಾರದಲ್ಲಿ ಮಾಲಕರ ನಡುವೆ ಜಗಳ; ಇಬ್ಬರ ಗುಂಡಿಕ್ಕಿ ಹತ್ಯೆ
Photo: NDTV
ಭೋಪಾಲ್ : ಸಾಕು ನಾಯಿಗಳ ವಿಚಾರದಲ್ಲಿ ನೆರೆಹೊರೆಯವರ ನಡುವಿನ ಜಗಳದಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ಘಟನೆ ಇಂದೋರ್ನಲ್ಲಿ ಗುರುವಾರ ನಡೆದಿದೆ. ವೃತ್ತಿಯಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಅಗಿರುವ ರಾಜ್ಪಾಲ್ ಸಿಂಗ್ ರಜಾವತ್ ಎಂಬಾತ ರಾತ್ರಿ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ.
ರಜಾವತ್ ಮತ್ತಾತನ ನೆರೆಮನೆಯಾತ ವಿಮಲ್ ಅಚಲ (35) ಕೃಷ್ಣ ಬಾಗ್ ಕಾಲನಿಯ ಕಿರಿದಾದ ಮಾರ್ಗದಲ್ಲಿ ರಾತ್ರಿ 11 ಗಂಟೆ ವೇಳೆ ತಮ್ಮ ನಾಯಿಗಳೊಂದಿಗೆ ವಾಕಿಂಗ್ಗೆ ಹೋಗಿದ್ದ ವೇಳೆ ಇಬ್ಬರ ನಾಯಿಗಳು ಪರಸ್ಪರ ಕಚ್ಚಾಡಿದ್ದವು.
ಇದರಿಂದ ಎರಡೂ ನಾಯಿಗಳ ಮಾಲಕರ ನಡುವೆ ಜಗಳ ಆರಂಭವಾಯಿತು. ತಕ್ಷಣ ಕಟ್ಟಡದ ಮೊದಲ ಮಹಡಿಯಲ್ಲಿದ್ದ ತನ್ನ ಮನೆಯ ಬಾಲ್ಕನಿಗೆ ಓಡಿದ ರಜಾವತ್ ತನ್ನ 12 ಬೋರ್ ರೈಫಲ್ ಬಳಸಿ ಅಚಲ್ ಮೇಲೆ ಗುಂಡು ಹಾರಿಸಿದ್ದ. ಆತ ಮೊದಲ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ರಸ್ತೆಯತ್ತ ಗುರಿಯಿರಿಸಿ ಗುಂಡು ಹಾರಿಸಿದ ಭಯಾನಕ ಘಟನೆಯನ್ನು ಯಾರೋ ವೀಡಿಯೋ ಚಿತ್ರೀಕರಿಸಿದ್ದಾರೆ.
ನಗರದಲ್ಲಿ ಸೆಲೂನ್ ನಡೆಸುವ ಅಚಲ್ ಹಾಗೂ ಇನ್ನೊಬ್ಬ ನೆರೆಮನೆಯಾತ 27 ವರ್ಷದ ರಾಹುಲ್ ವರ್ಮಾ ಗುಂಡೇಟಿಗೆ ಬಲಿಯಾಗಿದ್ದಾರೆ.
ರಸ್ತೆಯಲ್ಲಿ ಜಗಳ ನಡೆದ ಸಂದರ್ಭ ಆಗಮಿಸಿದ್ದವರಲ್ಲಿ ಆರು ಮಂದಿಗೆ ಗುಂಡಿನ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.
ರಜಾವತ್, ಆತನ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಎಂಬವರನ್ನು ಬಂಧಿಸಲಾಗಿದೆ. ರಜಾವತ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.