70 ಗಂಟೆ ಕೆಲಸ ವೈಯಕ್ತಿಕ ಆಯ್ಕೆಯೇ ಹೊರತು, ಬಲವಂತವಲ್ಲ: ಸಮಜಾಷಿ ನೀಡಿದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ

ನಾರಾಯಣಮೂರ್ತಿ | PTI
ಬೆಂಗಳೂರು: ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಸೋಮವಾರ ಪ್ರಯತ್ನಿಸಿದ್ದಾರೆ. ಈ ವೇಳಾಪಟ್ಟಿಯು ನನ್ನ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ಯಾರ ಮೇಲೆಯೂ ಹೇರಬಾರದು ಎಂದು ಅವರು ಹೇಳಿದ್ದಾರೆ.
ಇಂಡಿಯನ್ ಮರ್ಚಂಟ್ಸ್ ಚೇಂಬರ್ (ಐಎಮ್ಸಿ) ಸೋಮವಾರ ಏರ್ಪಡಿಸಿದ ‘ಕಿಲಾಚಂದ್ ಸ್ಮಾರಕ ಉಪನ್ಯಾಸ’ದ ವೇಳೆ ನಾರಾಯಣಮೂರ್ತಿ ಈ ಹೇಳಿಕೆ ನೀಡಿದರು.
‘‘ನೀವು ಇದನ್ನು ಮಾಡಬೇಕು, ಅದನ್ನು ಮಾಡಬಾರದು ಎಂದು ಹೇಳುವವರು ಯಾರೂ ಇಲ್ಲ. ನಾನು ಬೆಳಗ್ಗೆ 6:20ಕ್ಕೆ ಕಚೇರಿಗೆ ಹೋಗುತ್ತಿದ್ದೆ ಮತ್ತು ರಾತ್ರಿ 8:30ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ. ನಾನು ಹೀಗೆ 40 ವರ್ಷಕ್ಕಿಂತಲೂ ಹೆಚ್ಚು ಸಮಯ ಮಾಡಿದ್ದೇನೆ. ಇದು ವಾಸ್ತವ. ಹಾಗಾಗಿ, ಅದನ್ನು ತಪ್ಪು ಎಂದು ಯಾರೂ ಹೇಳುವಂತಿಲ್ಲ’’ ಎಂದು ಇನ್ಫೋಸಿಸ್ ಮುಖ್ಯಸ್ಥರು ಹೇಳಿದರು.
‘‘ಈ ವೇಳಾಪಟ್ಟಿಯನ್ನು ನಾನು ಅನುಸರಿಸಿದ್ದೇನೆ. ಆದರೆ ಇದನ್ನು ಇತರರೂ ಅನುಸರಿಸಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಕೆಲಸದ ಹವ್ಯಾಸವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಅದು ಸಾರ್ವಜನಿಕ ಚರ್ಚೆಯ ವಸ್ತುವಾಗಬಾರದು’’ ಎಂದರು.
ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅವರು ಈ ಸಮಜಾಷಿ ನೀಡಿದ್ದಾರೆ.