ಟೈಮ್ ಮ್ಯಾಗಝಿನ್ ನ ವಿಶ್ವದ ಅತ್ಯುತ್ತಮ ನೂರು ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಏಕೈಕ ಭಾರತೀಯ ಸಂಸ್ಥೆ
Infosys | Photo: PTI
ಹೊಸದಿಲ್ಲಿ: ಐಟಿ ದೈತ್ಯ ಇನ್ಫೋಸಿಸ್ 2023ನೇ ಸಾಲಿನಲ್ಲಿ ವಿಶ್ವದ ಅತ್ಯುತ್ತಮ ನೂರು ಕಂಪನಿಗಳ ಟೈಮ್ ಮ್ಯಾಗಝಿನ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ.
750 ಅತ್ಯುತ್ತಮ ಜಾಗತಿಕ ಕಂಪನಿಗಳಲ್ಲಿ ಇನ್ಫೋಸಿಸ್ 64ನೇ ಸ್ಥಾನದಲ್ಲಿದ್ದು, ದೈತ್ಯ ತಂತ್ರಜ್ಞಾನ ಕಂಪನಿಗಳಾದ ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಾಬೆಟ್ ಮತ್ತು ಮೆಟಾ ಪ್ಲಾಟ್ಫಾರ್ಮ್ಸ್ ಮೊದಲ ನಾಲ್ಕು ಸ್ಥಾನಗಳನ್ನು ಅಲಂಕರಿಸಿವೆ.
1981ರಲ್ಲಿ ಏಳು ಇಂಜಿನಿಯರ್ gಳಿಂದ ಸ್ಥಾಪನೆಗೊಂಡ ಬೆಂಗಳೂರು ಮೂಲದ ವೃತ್ತಿಪರ ಸೇವಾ ಸಂಸ್ಥೆ ಇನ್ಫೋಸಿಸ್ 2020ರ ಆದಾಯ ಅಂಕಿಅಂಶಗಳಂತೆ ಎರಡನೇ ಅತಿ ದೊಡ್ಡ ಭಾರತೀಯ ಐಟಿ ಕಂಪನಿಯಾಗಿದೆ. ಕಂಪನಿಯು ವಿಶ್ವಾದ್ಯಂತ ಮೂರು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು,ಹೆಚ್ಚಿನವರು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವದಲ್ಲಿಯ ಉನ್ನತ ಕಾರ್ಯ ನಿರ್ವಹಣೆಯ ಕಂಪನಿಗಳನ್ನು ಗುರುತಿಸಲು ಟೈಮ್ ಮ್ಯಾಗಝಿನ್ ಉದ್ಯೋಗಿ ತೃಪ್ತಿ, ಆದಾಯದ ಬೆಳವಣಿಗೆ ಮತ್ತು ಸುಸ್ಥಿರತೆ ಈ ಮೂರು ಆಯಾಮಗಳನ್ನು ಪರಿಶೀಲಿಸಿತ್ತು.
ಇನ್ಫೋಸಿಸ್ ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಏಕೈಕ ಭಾರತೀಯ ಸಂಸ್ಥೆಯಾಗಿರುವುದು ಮಾತ್ರವಲ್ಲ, ಅದು ಪಟ್ಟಿಯಲ್ಲಿರುವ ಅಗ್ರ ಮೂರು ವೃತ್ತಿಪರ ಸೇವಾ ಕಂಪನಿಗಳಲ್ಲಿಯೂ ಒಂದಾಗಿದೆ. ಅಸೆಂಚರ್ ಮತ್ತು ಡೆಲೊಯಿಟ್ ಇತರ ಎರಡು ಕಂಪನಿಗಳಾಗಿವೆ.
ಟೈಮ್ಸ್ನ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿನ ಅಗ್ರ 200ರಲ್ಲಿ ಇನ್ನೊಂದು ಭಾರತೀಯ ವೃತ್ತಿಪರ ಸೇವಾ ಕಂಪನಿಯಾಗಿರುವ ವಿಪ್ರೋ 174ನೇ ಸ್ಥಾನದಲ್ಲಿದೆ.