ಸಕ್ಕರೆ ಪ್ರಮಾಣ ಏರಿಕೆಯಾದ ಬಳಿಕ ಕೇಜ್ರಿವಾಲ್ಗೆ ಇನ್ಸುಲಿನ್ ನೀಡಲಾಗಿದೆ ; ತಿಹಾರ್ ಕಾರಾಗೃಹದ ಅಧಿಕಾರಿಗಳು
ಅರವಿಂದ್ ಕೇಜ್ರಿವಾಲ್ | PC : PTI
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಕ್ತದ ಸಕ್ಕರೆಯ ಪ್ರಮಾಣ ಏರಿಕೆಯಾದ ಬಳಿಕ ಅವರಿಗೆ ಕಡಿಮೆ ಡೋಸ್ ಇನ್ಸುಲಿನ್ ನೀಡಲಾಗಿದೆ ಎಂದು ತಿಹಾರ್ ಕಾರಾಗೃಹದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘‘ಏಮ್ಸ್ ವೈದ್ಯರ ಸಲಹೆ ಮೇರೆಗೆ ಕೇಜ್ರಿವಾಲ್ ಅವರಿಗೆ ಸೋಮವಾರ ಸಂಜೆ ಕಡಿಮೆ ಡೋಸ್ನ ಎರಡು ಯೂನಿಟ್ಗಳ ಇನ್ಸುಲಿನ್ ನೀಡಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಸುಮಾರು 7 ಗಂಟೆಗೆ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ 217ರಷ್ಟಿದ್ದು, ಈ ಹಿನ್ನೆಲೆಯಲ್ಲಿ ತಿಹಾರ್ ಕಾರಾಗೃಹದಲ್ಲಿರುವ ವೈದ್ಯರು ಅವರಿಗೆ ಇನ್ಸುಲಿನ್ ನೀಡಲು ನಿರ್ಧರಿಸಿದರು ಎಂದು ಅವರು ತಿಳಿಸಿದ್ದಾರೆ.
ಎಪ್ರಿಲ್ 20ರಂದು ಏಮ್ಸ್ನ ತಜ್ಞರು ಕೇಜ್ರಿವಾಲ್ ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ ಸಂದರ್ಭ, ಕೇಜ್ರಿವಾಲ್ ಅವರ ಸಕ್ಕರೆಯ ಪ್ರಮಾಣ ನಿರ್ಧಿಷ್ಟ ಮಟ್ಟವನ್ನು ದಾಟಿದಾಗ ಇನ್ಸುಲಿನ್ ನೀಡಬಹುದು ಎಂದು ತಿಹಾರ್ ಕಾರಾಗೃಹದ ವೈದ್ಯರಿಗೆ ಸಲಹೆ ನೀಡಿದ್ದರು.
ಈ ನಡುವೆ ತಿಹಾರ್ ಕಾರಾಗೃಹದಲ್ಲಿ ಕೇಜ್ರಿವಾಲ್ ಅವರ ರಕ್ತದ ಸಕ್ಕರೆಯ ಪ್ರಮಾಣ 320 ದಾಟಿದೆ ಎಂದು ಆಪ್ ಮೂಲಗಳು ತಿಳಿಸಿವೆ. ಕಾರಾಗೃಹದಲ್ಲಿ ಕೇಜ್ರಿವಾಲ್ ಅವರ ರಕ್ತದ ಸಕ್ಕರೆಯ ಪ್ರಮಾಣ ಕೆಲವು ಬಾರಿ ಏರಿಕೆಯಾಗಿದ್ದರೂ ಇದೇ ಮೊದಲ ಬಾರಿಗೆ ಇನ್ಸುಲಿನ್ ನೀಡಲಾಗಿದೆ ಎಂದು ಅದು ಹೇಳಿದೆ.
ಈಗ ರದ್ದುಗೊಳಿಸಲಾಗಿರುವ ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾರ್ಚ್ 21ರಂದು ಬಂಧಿಸಿತ್ತು. ಎಪ್ರಿಲ್ 1ರಿಂದ ಅವರನ್ನು ತಿಹಾರ್ ಕಾರಾಗೃಹದಲ್ಲಿ ಇದ್ದಾರೆ.