ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಯೂಟರ್ನ್: ಬಿಜೆಡಿಯಲ್ಲಿ ಮುಂದುವರಿದ ಆಂತರಿಕ ಕಲಹ

ನವೀನ್ ಪಟ್ನಾಯಕ್ (PTI)
ಭುವನೇಶ್ವರ: ವಕ್ಫ್ ತಿದ್ದುಪಡಿ ಮಸೂದೆ, 2025ರ ಕುರಿತು ದಿಢೀರನೆ ತನ್ನ ನಿಲುವು ಬದಲಿಸಿದ ಬಿಜು ಜನತಾ ದಳ ಪಕ್ಷದ ನಡೆಯ ವಿರುದ್ಧ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದ್ದು, ಆಂತರಿಕ ಕಲಹ ಸ್ಫೋಟಗೊಂಡಿದೆ. ಮೊದಲಿಗೆ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ನಿಲುವು ತೆಗೆದುಕೊಂಡಿದ್ದ ಬಿಜು ಜನತಾ ದಳ, ನಂತರ, ರಾಜ್ಯಸಭೆಯಲ್ಲಿ ತಮ್ಮ ಮನಸಾಕ್ಷಿಯಂತೆ ಮಸೂದೆಯ ಮೇಲೆ ಮತ ಚಲಾಯಿಸುವ ಅಧಿಕಾರವನ್ನು ತನ್ನ ಸಂಸದರಿಗೆ ನೀಡಿತ್ತು. ಬಿಜು ಜನತಾ ದಳ ಪಕ್ಷದ ಈ ನಿಲುವಿನ ವಿರುದ್ಧ ಪಕ್ಷದೊಳಗೇ ತೀವ್ರ ಟೀಕೆ ವ್ಯಕ್ತವಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಪಕ್ಷವು ತನ್ನ ನಿಲುವನ್ನು ಬದಲಿಸಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರ ಆಪ್ತ ಹಾಗೂ ಮಾಜಿ ಅಧಿಕಾರಿ ವಿ.ಕೆ.ಪಾಂಡ್ಯನ್ ರನ್ನು ಬಿಜೆಡಿ ಪಕ್ಷದ ರಾಜ್ಯಸಭಾ ಸಂಸದ ದೇಬಾಶಿಶ್ ಸಮಂತರಾಯ್ ಬಹಿರಂಗವಾಗಿಯೇ ದೂಷಿಸಿದ್ದಾರೆ. ಮತದಾನದ ವೇಳೆ ರಾಜ್ಯಸಭೆಗೆ ಗೈರಾಗಿದ್ದ ಸಮಂತರಾಯ್, ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ಪಕ್ಷದ ನಿಲುವಿನ ಕುರಿತು ಗೊಂದಲವುಂಟಾಗಿತ್ತು ಎಂದು ಹೇಳಿದ್ದು, 10 ತಿಂಗಳ ಹಿಂದೆಯೇ ರಾಜಕೀಯದಿಂದ ನಿವೃತ್ತರಾಗಿರುವುದಾಗಿ ಪಾಂಡ್ಯನ್ ಅಧಿಕೃತವಾಗಿ ಪ್ರಕಟಿಸಿದ್ದರೂ, ಈಗಲೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಂಡ್ಯನ್ ಒಬ್ಬರೇ ಪ್ರಾದೇಶಿಕ ಪಕ್ಷವಾದ ಬಿಜು ಜನತಾ ದಳವನ್ನು ನಾಶಗೊಳಿಸಿದ್ದಾರೆ ಎಂದೂ ಅವರು ಅಪಾದಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಹಲವಾರು ಬಿಜು ಜನತಾ ದಳ ಸಂಸದರು ಪಾಂಡ್ಯನ್ ರಕ್ಷಣೆಗೆ ಧಾವಿಸಿದ್ದಾರೆ. ಸಮಂತರಾಯ್ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಾಜ್ಯಸಭಾ ಸಂಸದ ಮಾನಸ್ ಮಂಗರಾಜ್, ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುವ ಅಂತಿಮ ಅಧಿಕಾರವೀಗಲೂ ನವೀನ್ ಪಟ್ನಾಯಕ್ ಬಳಿಯೇ ಇದೆ ಎಂದು ನೆನಪಿಸಿದ್ದಾರೆ. ಆಂತರಿಕ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕೇ ಹೊರತು, ಮಾಧ್ಯಮಗಳಲ್ಲಲ್ಲ ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಮತದಾನದ ವೇಳೆ ಸ್ವಯಂ ಗೈರಾಗಿದ್ದ ಸಮಂತ್ ರಾಯ್, ಜನರ ಗಮನವನ್ನು ಬೇರೆಡೆ ಸೆಳೆಯಲು ಪಾಂಡ್ಯನ್ ಅವರನ್ನು ಹರಕೆಯ ಕುರಿಯನ್ನಾಗಿಸುತ್ತಿದ್ದಾರೆ ಎಂದು ಬಿಜು ಜನತಾ ದಳದ ಮತ್ತೊಬ್ಬ ರಾಜ್ಯಸಭಾ ಸಂಸದೆ ಸುಲತಾ ಡಿಯೊ ಆರೋಪಿಸಿದ್ದಾರೆ. ನವೀನ್ ಪಟ್ನಾಯಕ್ ರ ನಿವಾಸದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದ ಸಮಂತ್ ರಾಯ್, ವೈಯಕ್ತಿಕ ಕಾರಣಗಳಿಗಾಗಿ ಪಾಂಡ್ಯನ್ ರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದೂ ಅವರು ದೂರಿದ್ದಾರೆ.