ಶ್ರೀಲಂಕಾ ಜನಾಂಗೀಯ ಸಂಘರ್ಷ ಕುರಿತ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ
ವಾಷಿಂಗ್ಟನ್: ಶ್ರೀಲಂಕಾ ಮೂಲದ ಅಮೆರಿಕನ್ ಲೇಖಕಿ ವಿ.ವಿ.ಗಣೇಶನಂದನ್ ಅವರ 'ಬ್ರದರ್ಲೆಸ್ ನೈಟ್' ಕಾದಂಬರಿಗೆ 2024ನೇ ಸಾಲಿನ ಅತ್ಯುತ್ತಮ ಮಹಿಳಾ ಕಾದಂಬರಿ ಪ್ರಶಸ್ತಿ ಲಭಿಸಿದೆ. ಶ್ರೀಲಂಕಾದ ಜನಾಂಗೀಯ ಸಂಘರ್ಷದಿಂದ ಛಿದ್ರವಾದ ಕುಟುಂಬದ ಕಥಾನಕ ಇದಾಗಿದೆ. ವಿ.ವಿ.ಗಣೇಶನಂದನ್ ಅವರಿಗೆ 30 ಸಾವಿರ ಪೌಂಡ್ ನಗದು ಬಹುಮಾನ ಮತ್ತು "ಬೆಸ್ಸೀ" ಹೆಸರಿನ ಕಂಚಿನ ವಿಗ್ರಹವನ್ನು ಪ್ರಶಸ್ತಿ ರೂಪದಲ್ಲಿ ನೀಡಲಾಗಿದೆ.
ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತೀರ್ಪುಗಾರರ ತಂಡದ ಮುಖ್ಯಸ್ಥೆ ಮೋನಿಕಾ ಅಲಿ ಈ ಬಗ್ಗೆ ಪ್ರತಿಕ್ರಿಯಿಸಿ, "ಬ್ರದರ್ಲೆಸ್ ನೈಟ್ ಒಂದು ಅದ್ಭುತ, ಬಲವಾದ ಮತ್ತು ಆಳವಾಗಿ ಚಲನಶೀಲವಾದ ಕಾದಂಬರಿಯಾಗಿದ್ದು, ಶ್ರೀಲಂಕಾದ ಜನಾಂಗೀಯ ಸಂಘರ್ಷದ ದುರಂತಗಳನ್ನು ಸೆರೆಹಿಡಿದ ಮತ್ತು ಆ ಬಗ್ಗೆ ಮಾಹಿತಿ ನೀಡುವ ಸಾಕ್ಷ್ಯವಾಗಿದೆ" ಎಂದು ಬಣ್ಣಿಸಿದ್ದಾರೆ. "ಸಮೃದ್ಧವಾದ ಸಂವಾದಾತ್ಮಕ ಗದ್ಯದಲ್ಲಿ ವಿ.ವಿ.ಗಣೇಶನಂದನ್ ಆ ಕಾಲಘಟ್ಟದ ವೈವಿಧ್ಯಮಯ ಚಿತ್ರಣವನ್ನು ಹಾಗೂ ಅಳಿಸಲಾಗದ ಪಾತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ವಿವರಿಸಿದ್ದಾರೆ.
ಬ್ರದರ್ಲೆಸ್ ನೈಟ್, ಸಂಕೀರ್ಣತೆ ಮತ್ತು ಸ್ಪಷ್ಟ ದೃಷ್ಟಿಯ ನೈತಿಕ ಪರಿಶೀಲನೆಯಾಗಿದ್ದು, ಅದ್ಭುತ ಕಥಾನಕ ಶೈಲಿ ಬಗೆಗಿನ ಅವರ ಬದ್ಧತೆಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಆರಂಭದಲ್ಲಿ ಈ ಕಾದಂಬರಿಗೆ ಕರೋಲ್ ಶೀಲ್ಡ್ಸ್ ಪ್ರೈಸ್ ಫಾರ್ ಫಿಕ್ಷನ್ ಪ್ರಶಸ್ತಿ ಸಂದಿತ್ತು. ಇದಕ್ಕೆ 1.5 ಲಕ್ಷ ಡಾಲರ್ ಬಹುಮಾನವನ್ನು ವಿ.ವಿ.ಗಣೇಶನಂದನ್ ಪಡೆದಿದ್ದರು.