ಲೋಕಸಭೆಯಲ್ಲಿ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಮಂಡನೆ
ನಿರ್ಮಲಾ ಸೀತಾರಾಮನ್ | PTI
ಹೊಸದಿಲ್ಲಿ: ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಬ್ಯಾಂಕಿಂಗ್ ಕ್ಷೇತ್ರದ ಆಡಳಿತವನ್ನು ಬಲಪಡಿಸುತ್ತದೆ ಮತ್ತು ಗ್ರಾಹಕ ಸಂತೃಪ್ತಿಯನ್ನು ಹೆಚ್ಚಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಕಾಯ್ದೆ 1955, ಬ್ಯಾಂಕಿಂಗ್ ಕಂಪೆನೀಸ್ (ಅಕ್ವಿಸಿಶನ್ ಆ್ಯಂಡ್ ಟ್ರಾನ್ಸ್ಫರ್ ಆಫ್ ಅಂಡರ್ಟೇಕಿಂಗ್ಸ್) ಕಾಯ್ದೆ 1970 ಮತ್ತು ಬ್ಯಾಂಕಿಂಗ್ ಕಂಪೆನೀಸ್ (ಅಕ್ವಿಸಿಶನ್ ಆ್ಯಂಡ್ ಟ್ರಾನ್ಸ್ಫರ್ ಆಫ್ ಅಂಡರ್ಟೇಕಿಂಗ್ಸ್) ಕಾಯ್ದೆ, 1980- ಈ ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತರಲು ಒಟ್ಟು 19 ತಿದ್ದುಪಡಿಗಳನ್ನು ಪ್ರಸ್ತಾವಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆ ಹೊಂದಿರುವ ಓರ್ವ ವ್ಯಕ್ತಿಯು ತನ್ನ ಖಾತೆಯಲ್ಲಿ ನಾಲ್ಕರವರೆಗೆ ಉತ್ತರಾಧಿಕಾರಿಗಳನ್ನು ನೇಮಿಸಲು ಮಸೂದೆಯು ಅವಕಾಶ ಮಾಡಿಕೊಡುತ್ತದೆ.
ತೆಗೆಯದ ಡಿವಿಡೆಂಡ್ಗಳು, ಶೇರುಗಳು ಮತ್ತು ಬಡ್ಡಿ ಅಥವಾ ಬಾಂಡ್ಗಳಿಂದ ಬರುವ ಪ್ರತಿಫಲವನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ (ಐಇಪಿಎಫ್)ಗೆ ವರ್ಗಾಯಿಸಲು ಮತ್ತು ಈ ನಿಧಿಯಿಂದ ತಮಗೆ ಸೇರಿರುವ ಮೊತ್ತಗಳನ್ನು ಹಿಂಪಡೆಯಲು ವ್ಯಕ್ತಿಗಳಿಗೆ ಈ ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.