ತನಿಖಾ ಸಂಸ್ಥೆಗಳು ಶೋಧ ಮತ್ತು ಜಪ್ತಿ ಅಧಿಕಾರಗಳು ಹಾಗೂ ಖಾಸಗಿತನ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು: ಸಿಜೆಐ ಚಂದ್ರಚೂಡ್
ಡಿ.ವೈ.ಚಂದ್ರಚೂಡ್ | Photo: PTI
ಹೊಸದಿಲ್ಲಿ: ಶೋಧ ಮತ್ತು ಜಪ್ತಿ ಅಧಿಕಾರಗಳು ಹಾಗೂ ವ್ಯಕ್ತಿಯ ಖಾಸಗಿತನ ಹಕ್ಕುಗಳ ನಡುವೆ ಸಮತೋಲನವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಕಾಯ್ದುಕೊಳ್ಳಬೇಕಾದ ನ್ಯಾಯಯುತ ಸಮಾಜದ ಮೂಲಾಧಾರವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ಹೇಳಿದ್ದಾರೆ.
ಸೋಮವಾರ ಇಲ್ಲಿ ಸಿಬಿಐ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,ಕೇಂದ್ರೀಯ ಏಜೆನ್ಸಿಗಳು ತಮ್ಮ ಪರಿಣಾಮಕಾರಿಕಾರಿ ಕಾರ್ಯ ನಿರ್ವಹಣೆಗಾಗಿ ಸೂಕ್ತ ಪ್ರಕ್ರಿಯೆಯನ್ನು ಎತ್ತಿ ಹಿಡಿಯುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ದಾಳಿಗಳನ್ನು ನಡೆಸಿದ ಸಂದರ್ಭದಲ್ಲಿ ಅನಗತ್ಯವಾಗಿ ವೈಯಕ್ತಿಕ ಸಾಧನಗಳನ್ನು ಜಪ್ತಿ ಮಾಡುವ ಘಟನೆಗಳು ತನಿಖೆಯ ಅನಿವಾರ್ಯತೆಗಳು ಮತ್ತು ವ್ಯಕ್ತಿಗತ ಖಾಸಗಿತನ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ ಎಂದರು.
ದಾಳಿಗಳನ್ನು ಹೇಗೆ ನಡೆಸಬೇಕು ಮತ್ತು ವಿದ್ಯುನ್ಮಾನ ಸಾಧನಗಳನ್ನು ತಿರುಚುವಿಕೆಯಿಂದ ಸುರಕ್ಷಿತವಾಗಿರಿಸಲು ಅವುಗಳನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂಬ ಬಗ್ಗೆ ಸಿಬಿಐ ಕೈಪಿಡಿಯು ಮಾರ್ಗಸೂಚಿಗಳನ್ನು ಒದಗಿಸಿದೆ ಎಂದು ಹೇಳಿದ ನ್ಯಾ.ಚಂದ್ರಚೂಡ್,ತನಿಖೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಂತಹ ಡಿಜಿಟಲ್ ಸಾಧನಗಳಿಗೆ ‘ಹ್ಯಾಷ್ ವ್ಯಾಲ್ಯೂ’ಗಳನ್ನು ಒದಗಿಸುವುದನ್ನು ಸಿಬಿಐ ಕೈಪಿಡಿಯು ಕಡ್ಡಾಯಗೊಳಿಸಿದೆ ಎಂದರು.
ವಿದ್ಯುನ್ಮಾನ ಬೆರಳಚ್ಚುಗಳನ್ನು ಹೋಲುವ ‘ಹ್ಯಾಷ್ ವ್ಯಾಲ್ಯೂ’ಗಳನ್ನು ವಶಪಡಿಸಿಕೊಳ್ಳಲಾದ ವಿದ್ಯುನ್ಮಾನ ಸಾಧನೆಗಳ ಸಮಗ್ರತೆಯ ಸುರಕ್ಷತೆಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಸೃಷ್ಟಿಸಲಾಗುತ್ತದೆ. ‘ಹ್ಯಾಷ್ ವ್ಯಾಲ್ಯೂ’ ಸಾಧನ ಮತ್ತು ಅದರಲ್ಲಿಯ ದತ್ತಾಂಶಗಳನ್ನು ತಿರುಚಲಾಗಿಲ್ಲ ಎನ್ನುವುದನ್ನು ಖಚಿತಪಡಿಸಲು ಬಳಸಲಾಗುವ ವಿಶಿಷ್ಟ ಸಂಖ್ಯೆಯಾಗಿದೆ.
ನವಂಬರ್ನಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರವು ಪತ್ರಕರ್ತರ ಡಿಜಿಟಲ್ ಸಾಧನಗಳ ಶೋಧ ಮತ್ತು ಜಪ್ತಿಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿತ್ತು.
ಜನವರಿಯಲ್ಲಿ,ವಿದ್ಯುನ್ಮಾನ ಸಾಧನಗಳ ಶೋಧ ಮತ್ತು ಜಪ್ತಿ ಕುರಿತು ಮಾರ್ಗಸೂಚಿಗಳನ್ನು ಕೋರಿ ಸುದ್ದಿ ಜಾಲತಾಣ ನ್ಯೂಸ್ಕ್ಲಿಕ್ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ದಿಲ್ಲಿ ಪೋಲಿಸ್,ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ.)ಕ್ಕೆ ಸೂಚಿಸಿತ್ತು.
ಸೋಮವಾರ ನ್ಯಾ.ಚಂದ್ರಚೂಡ್ ಅವರೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಪರಾಧಗಳು ಮತ್ತು ದೇಶದ ವಿರುದ್ಧ ಆರ್ಥಿಕ ಅಪರಾಧಗಳ ತನಿಖೆಯತ್ತ ಮಾತ್ರ ಗಮನವನ್ನು ಕೇಂದ್ರೀಕರಿಸುವಂತೆ ತನಿಖಾ ಸಂಸ್ಥೆಗಳನ್ನು ಆಗ್ರಹಿಸಿದರು.
ಸಿಬಿಐ ಬಳಿ ಬಾಕಿಯುಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಯ ಅಗತ್ಯವಿದೆ ಎಂದೂ ಹೇಳಿದ ನ್ಯಾ.ಚಂದ್ರಚೂಡ್,ಆರೋಪಿಗಳು ಕಾನೂನಿನ ಗಂಭೀರ ಉಲ್ಲಂಘನೆಗಳ ಆರೋಪಗಳನ್ನು ಹೊತ್ತಿರುತ್ತಾರೆ,ಇದು ಅವರ ಬದುಕು ಮತ್ತು ವ್ಯಕ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ವಿಳಂಬಗಳು ನ್ಯಾಯ ವಿತರಣೆಗೆ ಅಡ್ಡಿಯಾಗುತ್ತವೆ. ಸಿಬಿಐ ನಿಧಾನವಾಗಿ ಪ್ರಕರಣಗಳ ವಿಲೇವಾರಿ ಮಾಡುವುದನ್ನು ನಿವಾರಿಸಲು ಬಹುಮುಖಿ ಕಾರ್ಯತಂತ್ರದ ಅಗತ್ಯವಿದೆ ಎಂದರು.
ಆಡಳಿತಾರೂಢ ಬಿಜೆಪಿಯು ತಮ್ಮ ಮೇಲೆ ಒತ್ತಡ ಹೇರಲು ಈ.ಡಿ.ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹಲವಾರು ಪ್ರತಿಪಕ್ಷ ನಾಯಕರು ಆರೋಪಿಸುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಾಧೀಶರ ಈ ಹೇಳಿಕೆಗಳು ಹೊರಬಿದ್ದಿವೆ.